ನವದೆಹಲಿ:ಕೊರೊನಾ ವೈರಸ್ ಹಬ್ಬುವಿಕೆಯ ಭೀತಿಯಿಂದಾಗಿ ದೇಶಾದ್ಯಂತ ಲಾಕ್‌ಡೌನ್ ವಿಧಿಸಿದ್ದರಿಂದ ತೊಂದರೆಗೆ ಸಿಲುಕಿರುವ ಕಟ್ಟಡ ಕಾರ್ಮಿಕರ ನೆರವಿಗೆ ಕೇಂದ್ರ ಸರ್ಕಾರ ಧಾವಿಸಿದೆ.
ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಸೆಸ್ ನಿಧಿ ಬಳಸಿಕೊಳ್ಳುವಂತೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದೆ.
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಸಲಹೆಯಲ್ಲಿ ಎಲ್ಲಾ ರಾಜ್ಯ ಸರ್ಕಾರಗಳು / ಕೇಂದ್ರಾಡಳಿತ ಪ್ರದೇಶಗಳು ಕಟ್ಟಡ ಕಾರ್ಮಿಕರ ಖಾತೆಗೆ ಹಣವನ್ನು ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ವರ್ಗಾಯಿಸಲು ಸೂಚಿಸಿದೆ. ಕಾರ್ಮಿಕ ಕಲ್ಯಾಣ ಮಂಡಳಿಗಳು ಸಂಗ್ರಹಿಸಿದ ಸೆಸ್ ನಿಧಿಯಿಂದ ಈ ಹಣ ನೀಡುಬಹುದು ಎಂದು ಟ್ವೀಟ್ ಮೂಲಕ ತಿಳಿಸಿದೆ.
ಕೋವಿಡ್-19 ಏಕಾಏಕಿ ಹಬ್ಬಿದ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ಪರಿಹಾರ ಒದಗಿಸಲು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಎಲ್ಲಾ ರಾಜ್ಯಗಳು /ಕೇಂದ್ರಾಡಳಿತ ಪ್ರದೇಶಗಳು ಸೆಸ್ ನಿಧಿ ಬಳಸಹಬಹುದು ಎಂದು ಕಾರ್ಮಿಕ ಸಚಿವಾಲಯ ಟ್ವೀಟ್ ಮಾಡಿದೆ.
ಅಡ್ವೈಸರಿ ಪ್ರಕಾರ, 52,000 ರೂ. ಕೋಟಿವರೆಗೆ ಸೆಸ್ ನಿಧಿ ಸಂಗ್ರಹವಾಗಿದೆ. ನಿರ್ಮಾಣ ಕಲ್ಯಾಣ ಮಂಡಳಿಯಲ್ಲಿ ಸುಮಾರು 3.5 ಕೋಟಿ ಕಾರ್ಮಿಕರು ಹೆಸರು ನೋಂದಾಯಿಸಿಕೊಂಡಿದ್ದಾರೆ.
ರಾಜ್ಯ ಕಲ್ಯಾಣ ನಿಧಿ ಮಂಡಳಿಗಳಲ್ಲಿ ನೋಂದಾಯಿಸಿಕೊಂಡಿರುವ ನಿರ್ಮಾಣ ಕಾರ್ಮಿಕರಿಗೆ ಈ ರೀತಿಯ ನಿಧಿಯ ವರ್ಗಾವಣೆ ಸಾಧ್ಯ ಎಂದು ಮಾಜಿ ಉಪ ಮುಖ್ಯ ಕಾರ್ಮಿಕ ಆಯುಕ್ತ ಡಾ. ಸಯಂ ಸುಂದರ್ ವಿವರಿಸಿದ್ದಾರೆ.
ಸುಮಾರು 52,000 ಕೋಟಿ ರೂ.ಗಳಷ್ಟು ದೊಡ್ಡ ಮೊತ್ತವು ಸೆಸ್ ನಿಧಿಯಲ್ಲಿದೆ. ಆದ್ದರಿಂದ ಬಿಕ್ಕಟ್ಟಿನ ಈ ಅವಧಿಯಲ್ಲಿ ನಿರ್ಮಾಣ/ಕಟ್ಟಡ ಕಾರ್ಮಿಕರಿಗೆ ಪರಿಹಾರ ಒದಗಿಸಲು ಈ ಹಣವನ್ನು ಬಳಸಿಕೊಳ್ಳುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ.