ನವದೆಹಲಿ: ದೇಶಾದ್ಯಂತ ಸೆಪ್ಟೆಂಬರ್ 1ರಿಂದ ಅನ್ಲಾಕ್ 4.0 ನಿಯಮ ಜಾರಿಗೊಂಡಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಮೆಟ್ರೋ ಸೇವೆ ಸೇರಿದಂತೆ ಅನೇಕ ಸಡಲಿಕೆ ನೀಡಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ. ಇದೀಗ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರ ಶಾಲೆಗಳನ್ನ ಭಾಗಶಃ ಪುನಾರಂಭಿಸಲು ಅನುಮತಿ ನೀಡಿದೆ.
ಸೆಪ್ಟೆಂಬರ್ 21ರಿಂದ ದೇಶಾದ್ಯಂತ 9ರಿಂದ 12ನೇ ತರಗತಿವರೆಗೆ ಸ್ವಯಂ ಪ್ರೇರಿತವಾಗಿ ಶಾಲೆ ಆರಂಭಿಸಲು ಕೇಂದ್ರ ಆರೋಗ್ಯ ಸಚಿವಾಲಯ ಮಾರ್ಗಸೂಚಿ ಹೊರಡಿಸಿದ್ದು, ಈ ವೇಳೆ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಂದ ಮಾರ್ಗದರ್ಶನ ಪಡೆದುಕೊಳ್ಳಲು ಅನುಮತಿ ನೀಡಲಾಗಿದೆ.
ಶಾಲೆಗೆ ಬರುವ ವಿದ್ಯಾರ್ಥಿಳು, ಶಿಕ್ಷಕರು, ಉದ್ಯೋಗಿಗಳು ಕೊರೊನಾ ಮಾರ್ಗಸೂಚಿ ಪಾಲನೆ ಮಾಡುವುದು ಕಡ್ಡಾಯವಾಗಿದೆ. ಶಾಲೆಗೆ ಬರುವ ವಿದ್ಯಾರ್ಥಿಗಳ ಪೋಷಕರಿಂದ ಲಿಖಿತ ಒಪ್ಪಿಗೆ ಪಡೆದುಕೊಳ್ಳಬೇಕಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ಸರ್ಕಾರ ಇದೀಗ ಹಂತ ಹಂತವಾಗಿ ಅನ್ಲಾಕ್ ಪ್ರಕ್ರಿಯೆ ಆರಂಭಿಸಿದ್ದು, ಇದೀಗ ಶಾಲಾ-ಕಾಲೇಜ್ ಆರಂಭ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದರು. ಶಾಲೆಗೆ ತೆರಳುವ ವಿದ್ಯಾರ್ಥಿಗಳು ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿದೆ. ಮೇಲಿಂದ ಮೇಲೆ ಕೈ ತೊಳೆದುಕೊಳ್ಳುವುದು ಹಾಗೂ ಎಲ್ಲೆಂದರಲ್ಲಿ ಉಗುಳುವುದು ನಿಷೇಧ ಎಂದು ತಿಳಿಸಿದೆ.
ಕಂಟೈನ್ಮೆಂಟ್ ಪ್ರದೇಶ ಹೊರತು ಪಡಿಸಿ ಶಾಲಾ-ಕಾಲೇಜ್ ಓಪನ್ ಆಗಲಿದ್ದು, ಉಳಿದಂತೆ ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಈ ಚಟುವಟಿಕೆಗೆ ಅವಕಾಶವಿಲ್ಲ ಎಂದು ತಿಳಿಸಿದೆ.