ದೆಹಲಿ: ಜಮ್ಮು-ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ಹಲವು ಭೂ ಕಾನೂನು ತಿದ್ದುಪಡಿಗಳನ್ನ ಜಾರಿಗೆ ತಂದು, ರಾಜ್ಯದ ಖಾಯಂ ನಿವಾಸಿ ಅನ್ನೋದನ್ನ ಕೈ ಬಿಟ್ಟಿರುವುದಕ್ಕೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಹಿರಿಯ ನಾಯಕ ಅಭಿಷೇಕ್ ಮನು ಸಿಂಘ್ವಿ, ಕಣಿವೆ ರಾಜ್ಯದಲ್ಲಿ ಜಾರಿಗೆ ತಂದಿರುವ ತಿದ್ದುಪಡಿ ಕಾನೂನುಗಳು ಹಿಮಾಚಲ ಪ್ರದೇಶ, ಉತ್ತರಾಖಂಡದಂತಹ ರಾಜ್ಯಗಳಲ್ಲಿ ಹೊಂದಿರುವಷ್ಟು ಕನಿಷ್ಟ ಸುರಕ್ಷತೆಗಳನ್ನು ಹೊಂದಿಲ್ಲ. ಕೇಂದ್ರ ಹಠಮಾರಿ ರಾಜಕೀಯ ಮಾಡ್ತಿದೆ ಎಂದು ವಾಗ್ದಾಳಿ ನಡೆಸಿದರು.
ಜಮ್ಮು-ಕಾಶ್ಮೀರದಲ್ಲಿ ಭೂ ಕಾನೂನು ತಿದ್ದುಪಡಿ ತರುವಾಗ ಪ್ರಜಾಪ್ರಭುತ್ವದ ಪ್ರಾಥಮಿಕ ನಿಯಮಗಳನ್ನು ಅನುಸರಿಸಿಲ್ಲ. ನೀವ್ಯಾಕೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ತೀರಿ? ಅಲ್ಲಿನ ಲೆಫ್ಟಿನೆಂಟ್ ಜನರಲ್ ಜತೆ ಚರ್ಚಿಸಿ ನಿರ್ಧಾರ ಕೈಗೊಂಡಿದ್ದೀರಾ? ಎಂದು ಕೇಂದ್ರ ಸರ್ಕಾರಕ್ಕೆ ಸಿಂಘ್ವಿ ಪ್ರಶ್ನಿಸಿದ್ದಾರೆ.
ಕಣಿವೆ ರಾಜ್ಯದಲ್ಲಿ ಭೂ ಕಾನೂನು ತಿದ್ದುಪಡಿ.. ವಿಪಕ್ಷಗಳು ಆಕ್ಷೇಪ ಇನ್ನು ಎನ್ಡಿಎ ಒಕ್ಕೂಟದ ಈ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಪೀಪಲ್ ಅಲಯನ್ಸ್, ಇದೊಂದು ದೊಡ್ಡ ದ್ರೋಹ ಹಾಗೂ ಜಮ್ಮು ಮತ್ತು ಕಾಶ್ಮೀರ ಜನರ ಹಕ್ಕುಗಳ ಮೇಲಿನ ಆಕ್ರಮಣ ಎಂದಿದೆ.
ಈ ಹೊಸ ಕಾನೂನು ತಿದ್ದುಪಡಿಗಳಿಂದ ಕೃಷಿ ಭೂಮಿ ಮಾರುವಾಗ ನಿವಾಸದ ಸಂಕೇತವನ್ನು ಸಹ ತೆಗೆದುಹಾಕಲಾಗುತ್ತದೆ. ಇದರಿಂದ ಮಧ್ಯಮ ಮತ್ತು ಸಣ್ಣ ಭೂ ಮಾಲೀಕರಿಗೆ ಭಾರಿ ಪೆಟ್ಟು ಬೀಳುತ್ತದೆ. ಈ ಹೊಸ ಕಾನೂನುಗಳು ಲಡಾಖ್ಗೆ ಅನ್ವಯವಾಗುತ್ತವೋ, ಇಲ್ಲವೋ ಎಂಬುದು ಇನ್ನೂ ತಿಳಿದಿಲ್ಲ. ಕೇಂದ್ರದ ನಿರ್ಧಾರಗಳು ಇನ್ನೂ ಗೊಂದಲವಾಗಿವೆ ಎಂದು ಒಮರ್ ಅಬ್ದುಲ್ಲಾ ಅಭಿಪ್ರಾಯ ಪಟ್ಟಿದ್ದಾರೆ.
ಎನ್ಡಿಎ ಸರ್ಕಾರದ ನಿರ್ಧಾರಗಳು ಜಮ್ಮು-ಕಾಶ್ಮೀರ ಜನರ ಹಕ್ಕುಗಳನ್ನು ಕಸಿದುಕೊಂಡು, ಅವರನ್ನು ನಿರುತ್ಸಾಹಗೊಳಿಸುತ್ತಿವೆ. ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ಲೂಟಿ ಮಾಡಲು ವ್ಯವಸ್ಥಿತ ಕಾನೂನು ಜಾರಿಗೆ ತಂದಿದ್ದಾರೆ. ಕೇಂದ್ರದ ಇಂಥ ಲಜ್ಜೆಗೆಟ್ಟ ಕ್ರಮಗಳ ವಿರುದ್ಧ ಜಮ್ಮು-ಕಾಶ್ಮೀರ, ಲಡಾಖ್ನ ಜನತೆ ಒಂದಾಗಿ ಹೋರಾಡಬೇಕೆಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಕರೆ ಕೊಟ್ಟಿದ್ದಾರೆ.