ನವದೆಹಲಿ:ಕಾಲಾಳು ಪಡೆ ಅಥವಾ ಭೂಸೇನಾ ದಿನಾಚರಣೆಯಂದು ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಮತ್ತು ಭೂಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾನೆ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.
ಈ ದಿನದ ಮಹತ್ವ:
1947ರ ಅಕ್ಟೋಬರ್ 27 ರಂದು ಕಾಶ್ಮೀರ ಕಣಿವೆಯಲ್ಲಿ ಭಾರತೀಯ ನೆಲದ ಮೇಲೆ ಪಾಕಿಸ್ತಾನ ಮಾಡಿದ ಮೊದಲ ದಾಳಿಯನ್ನು ಭಾರತೀಯ ಸೇನೆಯು ದಿಟ್ಟವಾಗಿ ಹಿಮ್ಮೆಟ್ಟಿಸಿತು. ಸ್ವತಂತ್ರ ಭಾರತದ ಮೊದಲ ಮಿಲಿಟರಿ ಘಟನೆಯ ಸ್ಮರಣಾರ್ಥವಾಗಿ ಕಾಲಾಳುಪಡೆ ದಿನವನ್ನು ಆಚರಿಸಲಾಗುತ್ತದೆ.
ಈ ಕಾರ್ಯಾಚರಣೆಯಲ್ಲಿ ಸ್ವತಂತ್ರ ಭಾರತದ ಮೊದಲ ಪರಮವೀರ ಚಕ್ರ ಗೌರವವನ್ನು ಮೇಜರ್ ಸೋಮನಾಥ್ ಶರ್ಮ್ ಅವರಿಗೆ ನೀಡಲಾಗಿದೆ. ಆದ್ದರಿಂದ ಈ ದಿನವನ್ನು ಕುಮಾನ್ ರೆಜಿಮೆಂಟ್ ಮತ್ತು ಸಿಖ್ ರೆಜಿಮೆಂಟ್ ದಿನ ಎಂದೂ ನೆನಪಿಸಿಕೊಳ್ಳಲಾಗುತ್ತದೆ.
ಅಮೆರಿಕ ವಿದೇಶಾಂಗ ಕಾರ್ಯದರ್ಶಿಯಿಂದಲೂ ಗೌರವ ಅರ್ಪಣೆ:
ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕೆಲ್ ಪೊಂಪಿಯೊ ಮತ್ತು ಯುಎಸ್ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಸಹ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.
ಇದನ್ನೂ ಓದಿ:ಇಂಡೋ-ಅಮೆರಿಕ ಸ್ನೇಹ ವೃದ್ಧಿ, 2+2 ಸಂಭಾಷಣೆ ನಡೆಸಲು ಯುಎಸ್ ವಿದೇಶಾಂಗ ಕಾರ್ಯದರ್ಶಿ ಭಾರತ ಪ್ರವಾಸ
ಯುಎಸ್ ವಿದೇಶಾಂಗ ಕಾರ್ಯದರ್ಶಿ ಭಾರತ ಪ್ರವಾಸ:
ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕೆಲ್ ಪೊಂಪಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಮಾರ್ಕ್ ಟಿ. ಎಸ್ಪರ್ ಇಂದು ದೆಹಲಿಗೆ ಆಗಮಿಸಿದ್ದು, ಭಾರತೀಯ ನಿಯೋಗದೊಂದಿಗೆ ಅಮೆರಿಕ-ಇಂಡಿಯಾ ಸಮಗ್ರ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವವನ್ನು ಬಲಪಡಿಸುವ ಬಗ್ಗೆ ಚರ್ಚಿಸಲಿದ್ದಾರೆ. ಉಭಯ ರಾಷ್ಟ್ರಗಳ ಸ್ಥಿರತೆ ಮತ್ತು ಸಮೃದ್ಧಿ ಉತ್ತೇಜನಯ ಸಹಕಾರ ವಿಸ್ತರಣೆ ಹಾಗೂ ಇಂಡೋ-ಪೆಸಿಫಿಕ್ ಮತ್ತು ವಿಶ್ವವನ್ನು ಮುನ್ನಡೆಸಲು ಮೂರನೇ ಯುಎಸ್-ಇಂಡಿಯಾ 2+2 ಸಚಿವರ ಮಟ್ಟದ ಸಂಭಾಷಣೆ ನಡೆಯಲಿದೆ ಎಂದು ಯುಎಸ್ ವಿದೇಶಾಂಗ ವಕ್ತಾರ ಮೋರ್ಗನ್ ಒರ್ಟಾಗಸ್ ಹೇಳಿದ್ದಾರೆ.