ಹಥ್ರಾಸ್ (ಉತ್ತರ ಪ್ರದೇಶ):ದಲಿತ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ತನಿಖೆ ಮುಂದುವರೆದಿದ್ದು, ಸಿಬಿಐ ಅಧಿಕಾರಿಗಳು ಯುವತಿಯ ಗ್ರಾಮಕ್ಕೆ ಭೇಟಿ ನೀಡಿ ಆರೋಪಿಗಳ ಸಂಬಂಧಿಗಳ ವಿಚಾರಣೆ ನಡೆಸುತ್ತಿದ್ದಾರೆ.
ಹಥ್ರಾಸ್ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಸಿಬಿಐ ಇಂದು ನಾಲ್ಕನೇ ದಿನದ ತನಿಖೆ ನಡೆಸುತ್ತಿದ್ದು, ಪ್ರಮುಖ ಆರೋಪಿಗಳಾದ ಸಂದೀಪ್, ರವಿ, ರಾಮು, ಲವ್ ಕುಶ್ ಅವರ ಕುಟುಂಬಸ್ಥರನ್ನು ವಿಚಾರಣೆ ನಡೆಸುತ್ತಿದ್ದಾರೆ.
ಮಂಗಳವಾರವಷ್ಟೇ ಹಥ್ರಾಸ್ ಪ್ರಕರಣದ ಸಂತ್ರಸ್ಥೆಯ ಕುಟುಂಬಸ್ಥರ ವಿಚಾರಣೆಯನ್ನು ಸಿಬಿಐ ಅಧಿಕಾರಿಗಳು ನಡೆಸಿದ್ದರು. ಸುಮಾರು 6 ಗಂಟೆ 40 ನಿಮಿಷಗಳ ಕಾಲ ವಿಚಾರಣೆ ನಡೆಸಿ ಅಗತ್ಯ ಮಾಹಿತಿಯನ್ನು ಕಲೆಹಾಕಿದ್ದರು.
ವಿಚಾರಣೆ ನಡೆಸುವ ಸಲುವಾಗಿಯೇ ಕೃಷಿ ಇಲಾಖೆಯ ಕಟ್ಟಡದಲ್ಲಿ ತಾತ್ಕಾಲಿಕ ಕಚೇರಿಯನ್ನು ಸಿಬಿಐ ಅಧಿಕಾರಿ ತೆರೆದಿದ್ದು, ಇದೇ ಕಚೇರಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ. ಕೆಲವು ದಿನಗಳ ಹಿಂದೆ ಘಟನಾ ಸ್ಥಳಗಳಿಗೆ ಭೇಟಿ ನೀಡಿ ಕೆಲವೊಂದು ಮಾದರಿ ಸಂಗ್ರಹಿಸುವ ಕೆಲಸವನ್ನು ಸಿಬಿಐ ಮಾಡಿತ್ತು.
ಇದರ ಜೊತೆಗೆ ಹಥ್ರಾಸ್ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಯುವತಿಗೆ ಚಿಕಿತ್ಸೆ ನೀಡಿದ ದಾಖಲೆಗಳನ್ನು ಪರಿಶೀಲನೆ ಮಾಡಿ ಸುಮಾರು ಒಂದು ಗಂಟೆ ಕಾಲ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ನಾಲ್ಕು ದಿನಗಳಿಂದಲೂ ಹಥ್ರಾಸ್ನಲ್ಲಿ ಬೀಡು ಬಿಟ್ಟಿರುವ ಅಧಿಕಾರಿಗಳು, ಉತ್ತರ ಪ್ರದೇಶ ಪೊಲೀಸರಿಂದಲೂ ಕೂಡ ಕೆಲವೊಂದು ದಾಖಲೆಗಳನ್ನು ಸಂಗ್ರಹಿಸಿ ತನಿಖೆ ಮುಂದುವರೆಸಿದ್ದಾರೆ.