ನವದೆಹಲಿ: ಉತ್ತರಪ್ರದೇಶದ ರಾಯ್ಬರೇಲಿಯಲ್ಲಿನ ಉನ್ನಾವೋ ಅತ್ಯಾಚಾರ ಸಂತ್ರಸ್ತೆಗೆ ಸಂಭವಿಸಿದ ಅಪಘಾತಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸೇರಿದಂತೆ 10 ಜನರ ಮೇಲೆ ಸಿಬಿಐ, ಪ್ರಕರಣ ದಾಖಲುಮಾಡಿದೆ.
ಅಲ್ಲದೆ 20ಕ್ಕೂ ಹೆಚ್ಚು ಜನರ ಮೇಲೆ ಕೊಲೆ, ಕೊಲೆ ಯತ್ನ, ಬೆದರಿಕೆ ಪ್ರಕರಣದ ಅಡಿ ಸಿಬಿಐ, ಪ್ರಕರಣ ದಾಖಲು ಮಾಡಿದೆ. ದೇಶವನ್ನೇ ಬೆಚ್ಚಿಬೀಳಿಸಿದ್ದ ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದರು.
ಸಂತ್ರಸ್ತೆಯು ರಾಯ್ಬರೇಲಿಯ ಜೈಲೊಂದರಲ್ಲಿರುವ ತನ್ನ ಮಾವನನ್ನು ಭೇಟಿಯಾಗಲು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ನಾವು ರಾಯ್ಬರೇಲಿಯ ಜೈಲಿಗೆ ತೆರಳುತ್ತಿರುವುದು ನಮ್ಮ ಊರಿನ ಎಲ್ಲರಿಗೂ ತಿಳಿದಿತ್ತು. ಈ ಘಟನೆಯ ಹಿಂದೆ ಆತ್ಯಾಚಾರ ಆರೋಪಿ ಬಿಜೆಪಿ ಶಾಸಕ ಕುಲ್ದೀಪ್ ಸೆಂಗಾರ್ ಕೈವಾಡವಿದೆ. ಕೇಸ್ ಇಲ್ಲಿಗೇ ಕೈಬಿಡಲಿ ಎಂದು ಈ ಕೃತ್ಯದ ಮೂಲಕ ಬೆದರಿಕೆ ಒಡ್ಡಿದ್ದಾನೆ ಎಂದು ಅತ್ಯಾಚಾರ ಸಂತ್ರಸ್ತೆಯ ಸಂಬಂಧಿಯೊಬ್ಬರು ಆರೋಪಿಸಿದ್ದರು.
ಸದ್ಯ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಸಿಬಿಐ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.