ಕೋಲ್ಕತ್ತಾ:ಈಸ್ಟರ್ನ್ ಕೋಲ್ಫೀಲ್ಡ್ಸ್ ಲಿಮಿಟೆಡ್ (ಇಸಿಎಲ್)ನಿಂದ ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ಮತ್ತು ಕಲ್ಲಿದ್ದಲು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಪಶ್ಚಿಮ ಬಂಗಾಳದ ಅಸನ್ಸೋಲ್, ದುರ್ಗಾಪುರ ಮತ್ತು ರಾಣಿಗಂಜ್ ವ್ಯಾಪ್ತಿಯ 10 ಸ್ಥಳಗಳಲ್ಲಿ ದಾಳಿ ನಡೆಸಿದೆ.
ಮೂಲಗಳ ಪ್ರಕಾರ, ಸುಮಾರು 75 ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ಕೇಸ್ ಸಂಬಂಧ ಅಕ್ರಮ ಕಲ್ಲಿದ್ದಲು ವಹಿವಾಟು ಜಾಲದ ಕಿಂಗ್ಪಿನ್ ಅನೂಪ್ ಮಾಜಿ ಅಲಿಯಾಸ್ ಲಾಲಾ ಮತ್ತು ಅವರ ಸಹಚರ ಬಿನೊಯ್ ಮಿಶ್ರಾ ಅವರ ಸಂಬಂಧಿಕರ ಮನೆಗಳಲ್ಲಿ ಸಿಬಿಐ ಶೋಧ ನಡೆಸಿದೆ.
ಕಲ್ಲಿದ್ದಲು ಹಗರಣ ಸಂಬಂಧ ಸೋಮವಾರದಂದು ಸಹ ಜಾರಿ ನಿರ್ದೇಶನಾಲಯ (ಇಡಿ) ಪಶ್ಚಿಮ ಬಂಗಾಳ ರಾಜ್ಯಾದ್ಯಂತ 12 ಸ್ಥಳಗಳಲ್ಲಿ ದಾಳಿ ನಡೆಸಿತ್ತು, ಉದ್ಯಮಿ ಗಣೇಶ್ ಬಗಾಡಿಯಾ ಮತ್ತು ಸಂಜಯ್ ಸಿಂಗ್ ಅವರ ನಿವಾಸ ಮತ್ತು ಕಚೇರಿಗಳಲ್ಲಿ ಶೋಧ ನಡೆದಿತ್ತು. ಕಲ್ಲಿದ್ದಲಿನ ಅಕ್ರಮ ವಹಿವಾಟಿಗೆ ಸಂಬಂಧಿಸಿದಂತೆ ಸೋಮವಾರ ಬೆಳಗ್ಗೆಯಿಂದ ಕೋಲ್ಕತ್ತಾದ ಲೇಕ್ ಟೌನ್ ಪ್ರದೇಶ, ಗರಿಯಾ, ಕೊನ್ನಗರದ ಹೂಗ್ಲಿ ಜಿಲ್ಲೆಯ ಕಾನೈಪುರ ಮತ್ತು ಉತ್ತರ 24 - ಪರಗಣಗಳಲ್ಲಿ ದಾಳಿ ನಡೆಸಲಾಗಿದೆ. ಉದ್ಯಮಿ ಬಾಗಾಡಿಯಾ ಮತ್ತು ಸಿಂಗ್ ಅವರು ಮಿಜ್ರಾ ಅವರೊಂದಿಗೆ ಸಹಭಾಗಿತ್ವದಲ್ಲಿ ನಡೆಸುತ್ತಿರುವ ಕಚೇರಿಗಳಲ್ಲಿ ಶೋಧಗಳು ಮಾಜಿ ಜೊತೆ ಕನೆಕ್ಷನ್ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.