ವಯನಾಡ್ (ಕೇರಳ): ಜಿಲ್ಲೆಯ ಮಾನಂದವಾಡಿ ಹಾಗೂ ಮೆಪ್ಪಡಿ ಪ್ರದೇಶಗಳಲ್ಲಿ ಹಲವಾರು ಬೆಕ್ಕುಗಳು ಸಾವಿಗೀಡಾಗುತ್ತಿರುವುದರಿಂದ ನಾಗರಿಕರಲ್ಲಿ ಆತಂಕ ಮೂಡಿದೆ. ಅಲ್ಲಲ್ಲಿ ಬೆಕ್ಕುಗಳು ಸತ್ತು ಬಿದ್ದಿರುವುದನ್ನು ಕಂಡ ಜನತೆ ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಬೆಕ್ಕಿನ ಕಳೇಬರದ ಸ್ಯಾಂಪಲ್ ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದ್ದಾರೆ. ಫೆಲೈನ್ ಪಾರ್ವೊವೈರಸ್ ಕಾಯಿಲೆಯಿಂದ ಬೆಕ್ಕುಗಳು ಸಾವಿಗೀಡಾಗಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ.
ಈ ಕುರಿತು ಮಾಹಿತಿ ನೀಡಿದ ವಯನಾಡು ಜಿಲ್ಲೆ ಮುಖ್ಯ ಪಶುವೈದ್ಯಾಧಿಕಾರಿ ಡಾ. ಡಿ. ರಾಮಚಂದ್ರನ್, "ಜಿಲ್ಲೆಯ ಮಾನಂದವಾಡಿ ಹಾಗೂ ಮೆಪ್ಪಡಿ ಪ್ರದೇಶಗಳಲ್ಲಿ ಬೆಕ್ಕುಗಳ ಸಾವಿನಿಂದ ನಾಗರಿಕರಲ್ಲಿ ಆತಂಕ ಮೂಡಿರುವುದು ಗಮನಕ್ಕೆ ಬಂದಿದೆ. ಸತ್ತ ಬೆಕ್ಕುಗಳ ಸ್ಯಾಂಪಲ್ಗಳನ್ನು ಪರೀಕ್ಷೆ ಮಾಡಲಾಗಿದ್ದು, ಫೆಲೈನ್ ಪಾರ್ವೊವೈರಸ್ನಿಂದ ಬೆಕ್ಕುಗಳು ಸಾವಿಗೀಡಾಗಿರುವುದು ಖಚಿತವಾಗಿದೆ. ಈ ವೈರಸ್ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವುದಿಲ್ಲವಾದ್ದರಿಂದ ಯಾರೂ ಆತಂಕ ಪಡುವ ಅಗತ್ಯವಿಲ್ಲ" ಎಂದು ಸ್ಪಷ್ಟಪಡಿಸಿದರು.
ಕಳೆದ ಎರಡ್ಮೂರು ದಿನಗಳಲ್ಲಿ ಸುತ್ತಮುತ್ತ 13 ಬೆಕ್ಕುಗಳು ಸತ್ತಿವೆ ಎಂದು ಬೆಕ್ಕುಗಳನ್ನು ಸಾಕಿರುವ ಸ್ಥಳೀಯರೊಬ್ಬರು ಹೇಳಿದರು.
"ಈಗಾಗಲೇ ಕೊರೊನಾ ವೈರಸ್ನಿಂದ ತತ್ತರಿಸಿರುವ ನಮಗೆ ಈ ಬೆಕ್ಕುಗಳ ಸಾವು ಮತ್ತಷ್ಟು ಆತಂಕ ಮೂಡಿಸಿತ್ತು. ಹೀಗಾಗಿ ತಕ್ಷಣ ನಾವು ಆರೋಗ್ಯ ಹಾಗೂ ಪಶು ಸಂಗೋಪನೆ ಇಲಾಖೆಗೆ ಮಾಹಿತಿ ನೀಡಿದ್ದೆವು. ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಸ್ಯಾಂಪಲ್ಗಳನ್ನು ತೆಗೆದುಕೊಂಡು ಹೋಗಿದ್ದಾರೆ." ಎಂದು ಸ್ಥಳೀಯ ನಿವಾಸಿ ಮಾಹಿತಿ ನೀಡಿದರು.