ನವದೆಹಲಿ: ದೇಶದ ರಾಜಧಾನಿ ದೆಹಲಿ ಈಗ ಮನುಷ್ಯರಿಗೆ ಉಸಿರಾಡಲು ಕಷ್ಟಕರವಾಗುವ ಪರಿಸ್ಥಿತಿಗೆ ತಲುಪಿದೆ. ಚಳಿಗಾಲದಲ್ಲಿ ಅದ್ರಲ್ಲೂ ಮುಖ್ಯವಾಗಿ ದೀಪಾವಳಿಯ ನಂತರ ದೆಹಲಿ ಈ ರೀತಿ ತೀವ್ರಸ್ವರೂಪದ ವಾಯುಮಾಲಿನ್ಯಕ್ಕೆ ತುತ್ತಾಗುತ್ತಿತ್ತು. ಆದ್ರೆ, ಈ ಬಾರಿಯಂತೂ ಗಾಳಿಯ ಗುಣಮಟ್ಟ ಅತ್ಯಂತ ಕಲುಷಿತವಾಗಿದೆ.
ಆಗಸ್ಟ್, ಸೆಪ್ಟಂಬರ್ ತಿಂಗಳಲ್ಲಿ ಅನುಕೂಲಕರ ವಾತಾವರಣವಿದ್ದ ಕಾರಣ ವಾಯು ಗುಣಮಟ್ಟ ಸ್ಥಿರತೆ ಕಂಡಿತ್ತು. ಈ ಬಾರಿಯ ದೀಪಾವಳಿಯ ವೇಳೆ ಪಟಾಕಿಗಳ ಹೊಡೆತದಿಂದಾಗಿ ಉಂಟಾಗಿರುವ ಹೊಗೆ ಸಂಪೂರ್ಣವಾಗಿ ಉತ್ತರ ಭಾರತವನ್ನು ಆವರಿಸಿಬಿಟ್ಟಿದ್ದು, ದಿಲ್ಲಿಗೆ ಪ್ರತಿಬಾರಿಯಂತೆ ಈಗಲೂ ವಾಯುಬಾಧೆ ಎದುರಾಗಿದೆ. ಇದರಿಂದ 'ಆರೋಗ್ಯ ತುರ್ತು ಪರಿಸ್ಥಿತಿ' ಘೋಷಣೆ ಮಾಡಿರುವ ಕೇಜ್ರಿವಾಲ್ ನೇತೃತ್ವದ ರಾಜ್ಯ ಸರ್ಕಾರ ನವೆಂಬರ್ 5ರಂದು ದಾಕಾ ಪಾಠಶಾಲೆಗಳಿಗೆ ರಜೆ ಘೋಷಿಸಿತ್ತು. ಸುತ್ತಮುತ್ತಲಿನ ರಾಜ್ಯಗಳಲ್ಲಿ ಮಳೆ ಸುರಿದು ಗಾಳಿಯ ಗುಣಮಟ್ಟ ತಹಬದಿಗೆ ಬರಲಿದೆ ಎಂದು ಅಧಿಕಾರಿಗಳು ಹೇಳ್ತಿದ್ರೂ ಹೇಳಿಕೆಗೆ ವಿರುದ್ಧವಾಗಿ ಪರಿಸ್ಥಿತಿ ಕೈಮೀರುತ್ತಿದೆ.
ಸಾಮಾನ್ಯವಾಗಿ ವಾಯು ಗುಣಮಟ್ಟ ಮಾಪಕದ ಪ್ರಕಾರ, 400-500 ಪಾಯಿಂಟ್ಗಳ ಮಧ್ಯೆ ಇದ್ದರೆ ಸಮಾಧಾನಕರ ಹಾಗೂ ಅದನ್ನೂ ಮೀರಿದರೆ 'ಅತ್ಯಂತ ಹಾನಿಕರ' ಎಂದು ಪರಿಗಣಿಸಲಾಗುತ್ತದೆ. ದೆಹಲಿಯಲ್ಲಿನ ಅನೇಕ ಕಡೆಗಳಲ್ಲಿ 500 ಪಾಯಿಂಟ್ಗಳನ್ನು ಮೀರಿದೆ. ದಟ್ಟವಾಗಿ ಹೊಗೆ ಆವರಿಸಿದ್ದು ಪರಿಣಾಮ ದೆಹಲಿಗೆ ಪ್ರಯಾಣಿಸುವ ಅನೇಕ ವಿಮಾನಗಳನ್ನು ರದ್ದು ಮಾಡಲಾಗಿದೆ. ಜನರು ಮುಖಕ್ಕೆ ಮುಖಗವಸು ಇಲ್ಲದೇ ಹೊರ ಬರಲಾಗದ ಸ್ಥಿತಿ ದೆಹಲಿಯಲ್ಲದೇ ಪಕ್ಕದ ಗುರುಗ್ರಾಮ, ಘಾಜಿಯಾಬಾದ್, ಫರಿದಾಬಾದ್, ನೋಯ್ಡಾ ಪ್ರದೇಶಗಳನ್ನು ಆವರಿಸಿದೆ. ಈ ವಿಷ ವಾಯುವಿನ ಪ್ರಭಾವಕ್ಕೆ ಒಳಗಾಗುವ ರಾಜ್ಯಗಳಲ್ಲಿ ಮಹಾರಾಷ್ಟ್ರ, ಮಧ್ಯ ಪ್ರದೇಶ, ಚತ್ತಿಸ್‌ಗಢ, ತೆಲಂಗಾಣ, ಒಡಿಶಾ ಇರುವುದು ವಾಯುಗಂಡಾಂತರ ಹಬ್ಬಿರುವ ವ್ಯಾಪ್ತಿಯನ್ನು ತೋರಿಸುತ್ತಿದೆ.