ಸ್ವಲ್ಪ ಹೆಚ್ಚಿನ ಬಡ್ಡಿದರದಿಂದ ಆಕರ್ಷಿತರಾಗಿ ಮತ್ತು ಹಣವಿಡಲು ಬ್ಯಾಂಕ್ ಒಂದು ಸುರಕ್ಷಿತ ಸ್ಥಳ ಎಂಬ ನಂಬಿಕೆಯಿಂದಾಗಿ, ಲಕ್ಷಾಂತರ ಜನರು ತಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಸಹಕಾರಿ ಬ್ಯಾಂಕುಗಳಲ್ಲಿ ಹೂಡಿಕೆ ಮಾಡುತ್ತಾರೆ. ಆದರೆ ಇಂದು ಗ್ರಾಹಕರ ಆ ನಂಬಿಕೆಯೇ ಅಲ್ಲಾಡುತ್ತಿದೆ. ಪಂಜಾಬ್ ಮಹಾರಾಷ್ಟ್ರ ಸಹಕಾರ ಬ್ಯಾಂಕ್ (ಪಿಎಮ್‌ಸಿ)ನ ಇತ್ತೀಚಿನ ಹಣಕಾಸು ಹಗರಣವು ಬ್ಯಾಂಕುಗಳ ಪುರಾಣವನ್ನು ಮತ್ತು ಆರ್‌ಬಿಐನಂತಹ ನಿಯಂತ್ರಕ ಘಟಕವು ಬ್ಯಾಂಕಿಂಗ್ ವ್ಯವಸ್ಥೆಯನ್ನು ನಿಯಂತ್ರಿಸುವಲ್ಲಿ ಹೇಗೆ ವಿಫಲವಾಗಿದೆ ಎಂವ ಅಂಶವನ್ನು ಬೆಳಕಿಗೆ ತಂದಿದೆ. ಎಷ್ಟೊ ಬ್ಯಾಂಕ್‌ಗಳ ಮುಳುಗಡೆ ಗ್ರಾಹಕರಲ್ಲಿ ಭೀತಿ ಹುಟ್ಟಿಸಿದೆ. ಸಹಕಾರಿ ಬ್ಯಾಂಕ್‌ಗಳ ಹಗರಣಗಳು ಇತ್ತೀಚಿನ ದಿನಗಳಲ್ಲಿ ತೀರ ಸಹಜ ಎಂಬಂತಾಗಿದೆ. ಅಂತಹ ಹಗರಣಗಳನ್ನು ಪುನರಾವರ್ತಿಸಲು ಬಿಡಬಾರದು ಎಂಬ ಸಂಕಲ್ಪವನ್ನು ಮಾಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚಿಗೆ ಮಂಡಿಸಿದ ಬಜೆಟ್ ಅದರ ಪ್ರತಿಬಿಂಬದಂತೆ ಕಾಣುತ್ತಿದೆ.
ಸಹಕಾರಿ ಬ್ಯಾಂಕುಗಳ ವೃತ್ತಿಪರತೆಯನ್ನು ಹೆಚ್ಚಿಸಲು, ಅವುಗಳಲ್ಲಿ ಹೂಡಿಕೆ ಅವಕಾಶಗಳನ್ನು ಹೆಚ್ಚಿಸಲು ಮತ್ತು ಆರ್‌ಬಿಐ ಮೇಲ್ವಿಚಾರಣೆಯ ಮೂಲಕ ವರ್ಧಿತ ಕಾರ್ಯಕ್ಷಮತೆಗಾಗಿ 'ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ' ತಿದ್ದುಪಡಿ ಮಾಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಅದರಂತೆ, 1,540 ಸಹಕಾರಿ ಬ್ಯಾಂಕುಗಳ 8.6 ಕೋಟಿ ದೇಶೀಯ ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು ಆರ್‌ಬಿಐ ತನ್ನ ನಿಯಂತ್ರಕ ಅಧಿಕಾರವನ್ನು ಚಲಾಯಿಸಲು ಅಧಿಕಾರ ನೀಡುವ ಪ್ರಮುಖ ಶಾಸನವನ್ನು ಮೋದಿ ಸರ್ಕಾರ ಅಂಗೀಕರಿಸಿತು.
ಹಿಂದಿನಂತೆ, ಸಹಕಾರಿ ರಿಜಿಸ್ಟ್ರಾರ್, ಸಹಕಾರಿ ಬ್ಯಾಂಕುಗಳ ಸ್ವಾಮ್ಯದ ಮೇಲ್ವಿಚಾರಣೆ ಮಾಡಬೇಕು. ಬ್ಯಾಂಕುಗಳ ನಿಯಂತ್ರಣಕ್ಕಾಗಿ ಕಾಲಕಾಲಕ್ಕೆ ಆರ್‌ಬಿಐ ಹೊರಡಿಸಿದ ಮಾರ್ಗಸೂಚಿಗಳನ್ನು ಸಹಕಾರಿ ಬ್ಯಾಂಕುಗಳು ಪಾಲಿಸಬೇಕು. ವಾಣಿಜ್ಯ ಬ್ಯಾಂಕುಗಳ ಮಾದರಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು (ಸಿಇಒ) ನೇಮಕ ಮಾಡಲು ಸಹಕಾರಿ ಬ್ಯಾಂಕುಗಳಿಗೆ ಆರ್‌ಬಿಐ ಅನುಮೋದನೆ ಅತ್ಯಗತ್ಯ. ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ ನಿಯಮಿತ ಲೆಕ್ಕಪರಿಶೋಧನಾ ಪ್ರಕ್ರಿಯೆಯನ್ನು ಕೈಗೊಳ್ಳಬೇಕು. ದುರ್ಬಲ ಸಹಕಾರಿ ಬ್ಯಾಂಕುಗಳ ನಿರ್ವಹಣೆಯನ್ನು ಸ್ವಾಧೀನಪಡಿಸಿಕೊಳ್ಳಲು ಆರ್‌ಬಿಐಗೆ ಅಧಿಕಾರ ನೀಡಲಾಗುವುದು ಎಂಬಿತ್ಯಾದಿ ಕಠಿಣ ನಿಯಮಗಳಿಗೆ ಮೋದಿ ಸರ್ಕಾರ ಅನುಮೋದನೆ ನೀಡಿದೆ. ವಾಸ್ತವವಾಗಿ, ಈ ಸುಧಾರಣೆಗಳು ಹಗರಣಗಳನ್ನು ತಡೆಗಟ್ಟಲು ಮತ್ತು ಸಹಕಾರಿ ಬ್ಯಾಂಕುಗಳ ಹೆಸರನ್ನು ರಕ್ಷಿಸಲು ಮೊದಲೇ ಕಾರ್ಯಗತಗೊಳಿಸಬೇಕಿತ್ತು.
ನಗರ ಸಹಕಾರಿ ಬ್ಯಾಂಕುಗಳು ನಗರ ಪ್ರದೇಶಗಳಲ್ಲಿನ ಸಣ್ಣ ಪ್ರಮಾಣದ ಕೈಗಾರಿಕೆಗಳು, ಚಿಲ್ಲರೆ ವ್ಯಾಪಾರಿಗಳು, ಉದ್ಯಮಿಗಳು, ವೃತ್ತಿಪರರು ಮತ್ತು ಸ್ಥಿರ ಆದಾಯ ಗುಂಪುಗಳಿಗೆ ಹಣಕಾಸು ಸೇವೆಗಳನ್ನು ವಿತರಿಸುವ ಗುರಿಯನ್ನು ಹೊಂದಿದ್ದವು. ಇವುಗಳು ಗುರಿಯಂತೆ ಸರಿಯಾಗಿ ಕಾರ್ಯ ನಿರ್ವಹಿಸಿದರೆ, ಈ ಬ್ಯಾಂಕುಗಳು ಮೇಲೆ ತಿಳಿಸಿದ ಎಲ್ಲ ಕ್ಷೇತ್ರಗಳ ಆರ್ಥಿಕತೆ ಅಭಿವೃದ್ಧಿಗೆ ಹೊಸ ಜೀವವನ್ನೇ ತುಂಬಬಹುದಿತ್ತು. ಆದರೆ, ಸ್ವಾರ್ಥಿ ಮತ್ತು ಹಿತಾಸಕ್ತಿಗಳ ಕೈಯಲ್ಲಿ ಸಿಕ್ಕಿಹಾಕಿಕೊಂಡಿರುವ ಈ ವ್ಯವಸ್ಥೆಯು ಅತ್ಯಂತ ವಿಶ್ವಾಸದಿಂದ ಈ ವ್ಯವಸ್ಥೆಯನ್ನು ನಂಬಿ ವ್ಯವಹಾರ ನಡೆಸುವ ಅಸಹಾಯಕ ಹೂಡಿಕೆದಾರರನ್ನು ಮೋಸಗೊಳಿಸುತ್ತಿದೆ.
ಈ ವಲಯದ ಪುಶ್ಚೇತನಕ್ಕಾಗಿ ರಚಿತವಾದ ನರಸಿಂಹಮೂರ್ತಿ ನೇತೃತ್ವದ ಸಮಿತಿಯು ನಗರ ಸಹಕಾರಿ ಬ್ಯಾಂಕುಗಳ ಅಸಂಘಟಿತ ಸ್ಥಿತಿಯ ಮೂಲ ಕಾರಣಗಳನ್ನು ವಿಶ್ಲೇಷಿಸಿದೆ: ಸಮರ್ಪಕ ಬಂಡವಾಳದ ಕೊರತೆ, ನಕಲಿ ಸದಸ್ಯತ್ವ, ಸಾಲ ನೀಡುವ ಅಧಿಕಾರಗಳ ಕೇಂದ್ರೀಕರಣ, ಹತ್ತಿರದ ವ್ಯಕ್ತಿಗಳಿಗೆ ಮತ್ತು ಪ್ರಿಯರಿಗೆ ವಿವೇಚನೆಯಿಲ್ಲದ ಸಾಲ ವಿತರಣೆ, ಕಳಪೆ ಸಾಲ ಮರುಪಡೆಯುವಿಕೆ, ಇತ್ಯಾದಿಗಳು ಈ ಕ್ಷೇತ್ರದ ವೈಫಲ್ಯಕ್ಕೆ ಕಾರಣ ಎಂದಿದೆ. ಬ್ಯಾಂಕುಗಳ ಸಂಖ್ಯೆ ಮತ್ತು ಠೇವಣಿಗಳ ಗಾತ್ರವು ಗಣನೀಯವಾಗಿ ವಿಸ್ತರಣೆಗೊಂಡಿರುವುದ ಕೂಡ ಕ್ಷೇತ್ರದ ಹಿನ್ನಡೆಗೆ ಬಲವಾದ ಕಾರಣವಾಗಿದೆ ಎಂದು ಸಮಿತಿ ತಿಳಿಸಿದೆ.