ನವದೆಹಲಿ:ಪೂರ್ವ ಲಡಾಕ್‌ನಲ್ಲಿ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಚೀನಾದ ಮಿಲಿಟರಿ ಆಕ್ರಮಣವನ್ನು ಖಂಡಿಸಿ, ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಚೀನಾದ ಸರಕುಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದು, ಅದಕ್ಕಾಗಿ 450 ಆಮದು ವಸ್ತುಗಳನ್ನು ಈಗಾಗಲೇ ಪಟ್ಟಿ ಮಾಡಿದೆ.
2021 ರ ಡಿಸೆಂಬರ್ ವೇಳೆಗೆ ಚೀನಾದ ಸಿದ್ಧಪಡಿಸಿದ ಸರಕುಗಳ ಆಮದನ್ನು 13 ಬಿಲಿಯನ್ ಅಥವಾ ಸುಮಾರು 1 ಲಕ್ಷ ಕೋಟಿ ಇಳಿಸುವುದು ಇದರ ಉದ್ದೇಶ ಎಂದು CAIT ಹೇಳಿದೆ.
ಪ್ರಸ್ತುತ ಭಾರತವು ಚೀನಾದಿಂದ ವಾರ್ಷಿಕವಾಗಿ ಸುಮಾರು 5.25 ಲಕ್ಷ ಕೋಟಿ ರೂ ಅಂದರೆ 70 ಬಿಲಿಯನ್, ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಳ್ಳುತ್ತದೆ.
ಮೊದಲ ಹಂತದಲ್ಲಿ, ಸಿಎಐಟಿ 500 ಕ್ಕೂ ಹೆಚ್ಚು ದೊಡ್ಡ ಮಟ್ಟದ ಆಮದು ವಿಭಾಗದ ವಸ್ತುಗಳನ್ನು ಆಯ್ಕೆ ಮಾಡಿದೆ, ಅವುಗಳು ಭಾರತದಲ್ಲಿ ಸ್ಥಳೀಯವಾಗಿ ತಯಾರಿಸಲ್ಪಡುವ 3,000 ಕ್ಕೂ ಹೆಚ್ಚು ವಸ್ತುಗಳನ್ನು ಈ ವಿಭಾಗ ಒಳಗೊಂಡಿವೆ, ಆದರೆ ಇವುಗಳನ್ನು ಚೀನಾದಿಂದ ಇಲ್ಲಿಯವರೆಗೆ ಆಮದು ಮಾಡಿಕೊಳ್ಳಲಾಗುತ್ತಿದೆ ಇದನ್ನು ನಿಲ್ಲಿಸಲು ತೀರ್ಮಾನಿಸಲಾಗಿದೆ ಎಂದು CAIT ತಿಳಿಸಿದೆ.
ಈ ವಸ್ತುಗಳ ತಯಾರಿಕೆಗೆ ಯಾವುದೇ ಅತ್ಯಾಧುನಿಕ ತಂತ್ರಜ್ಞಾನದ ಅಗತ್ಯವಿಲ್ಲ, ಹೀಗಾಗಿ ಭಾರತವು ಇವುಗಳನ್ನು ತಯಾರಿಸಲು ಶಕ್ತವಾಗಿದೆ. ಈ ಹಿನ್ನೆಲೆ ಭಾರತದಲ್ಲಿ ತಯಾರಿಸಿದ ಸರಕುಗಳನ್ನು ಚೀನಾದ ಸರಕುಗಳ ಬದಲಿಗೆ ಬಹಳ ಸುಲಭವಾಗಿ ಬಳಸಬಹುದು, ಇದು ಈ ಸರಕುಗಳಿಗೆ ನಾವು ಚೀನಾವನ್ನು ಅವಲಂಬಿಸುವುದನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದೆ.
ಲಡಾಖ್‌ನಲ್ಲಿ ಉಂಟಾದ ಚೀನಾದ -ಭಾರತ ಸೈನಿಕರ ಮುಖಾಮುಖಿಯಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದಾರೆ. ಈ ಕಾರಣಕ್ಕಾಗಿ 'ಸ್ವದೇಶಿ ಜಾಗರಣ ಮಂಚ್' ದೇಶದಲ್ಲಿ ನಡೆಯುವ ಟೆಂಡರ್ ಪ್ರಕ್ರಿಯೆಯಲ್ಲಿ ಚೀನಾ ಕಂಪೆನಿಗಳು ಭಾಗವಹಿಸುವುದನ್ನು ತಡೆಯುವಂತೆ ಒತ್ತಾಯಿಸಿದೆ. ಜೊತೆಗೆ ಇದು ದೆಹಲಿ-ಮೀರತ್ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ ಯೋಜನೆಗಾಗಿ ಚೀನಾದ ಶಾಂಘೈ ಟನಲ್ ಎಂಜಿನಿಯರಿಂಗ್ ಕಂ ಲಿಮಿಟೆಡ್ ಮಾಡಿದ ಬಿಡ್ ಅನ್ನು ರದ್ದುಗೊಳಿಸುವಂತೆ ಒತ್ತಾಯಿಸಿದೆ.
ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ 'ಸ್ವದೇಶಿ ಜಾಗರಣ ಮಂಚ್' ಭಾರತೀಯರಿಗೆ ಮನವಿ ಮಾಡಿದ್ದು, ಚೀನಾದ ಸರಕುಗಳ ಆಮದು ನಿಷೇಧ ಮತ್ತು ಭಾರತದಲ್ಲಿ ಮಾರಾಟವಾಗುವ 'ಮೇಡ್ ಇನ್ ಚೈನಾ' ಉತ್ಪನ್ನಗಳಿಗೆ ಸೆಸ್ ವಿಧಿಸುವಂತೆ ಒತ್ತಾಯಿಸಿದೆ. ಜೊತೆಗೆ ಸೆಲೆಬ್ರೆಟಿಗಳು ಕೂಡ ಚೀನಾ ನಿರ್ಮಿತ ವಸ್ತುಗಳನ್ನು ಬಳಸುವಂತೆ ಸಾರ್ವಜನಿಕರನ್ನು ಉತ್ತೇಜಿಸಬಾರದು ಎಂದು ಹೇಳಿದೆ. ಹೀಗೆ ಮಾಡಿದರೆ ಮಾತ್ರ ನಾವು ಹುತಾತ್ಮ ಯೋಧರಿಗೆ ನಮ್ಮ ನಿಜವಾದ ಸಂತಾಪ ಸೂಚಿಸಿದಂತಾಗುತ್ತದೆ ಎಂದು ತಿಳಿಸಿದೆ.
ಇತ್ತೀಚೆಗಷ್ಟೆ ಮಹಾರಾಷ್ಟ್ರ ಸರ್ಕಾರ ಮತ್ತು ಚೀನಾದ ಆಟೋ ಕಂಪೆನಿ ನಡುವೆ ನಡೆದ ಒಪ್ಪಂದವನ್ನ ರದ್ದುಗೊಳಿಸಬೇಕೆಂದು 'ಸ್ವದೇಶಿ ಜಾಗರಣ ಮಂಚ್' ಒತ್ತಾಯಿಸಿದೆ.