ಅಮರಾವತಿ (ಆಂಧ್ರಪ್ರದೇಶ): ಅಧಿಕಾರ ವಿಕೇಂದ್ರೀಕರಣದ ದೃಷ್ಟಿಯಿಂದ ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿ ಮಾಡುವುದಾಗಿ ಸಿಎಂ ಜಗನ್ ಮೋಹನ್ ರೆಡ್ಡಿ ಘೋಷಿಸಿದ್ದರು. ಈ ಬೆನ್ನಲ್ಲೇ ಇಂದು ಮಹತ್ವದ ಸಚಿವ ಸಂಪುಟ ಸಭೆ ನಡೀತು.
ಸಚಿವ ಸಂಪುಟ ಸಭೆಯಲ್ಲಿ ರಾಜಧಾನಿ ಕುರಿತು ಮಾತನಾಡಿದ ಸಿಎಂ ಜಗನ್, ರಾಜಧಾನಿಯ ನಿಧಿಯಲ್ಲಿ ಶೇಕಡಾ 10ರಷ್ಟು ವಿಶಾಖಪಟ್ಟಣಂಗೆ ಖರ್ಚು ಮಾಡಿದ್ರೆ ಹೈದರಾಬಾದ್ ನಗರದ ಮಟ್ಟಕ್ಕೆ ಬೆಳೆಯುತ್ತೆ ಎಂದರು.
ರಾಜಧಾನಿ ಬದಲಾವಣೆ ಬಗ್ಗೆ ಸಾರ್ವಜನಿಕರಿಗೆ ತಿಳಿಸೋಣ ಅಂತಾ ಕೆಲ ಮಂತ್ರಿಗಳು ಹೇಳಿದರು. ಮುಂದಿನ ತಿಂಗಳು 4ರಿಂದ ರಾಜಧಾನಿ ಬದಲಾವಣೆ ಬಗ್ಗೆ ತಿಳಿಸುವ ಕಾರ್ಯ ಮಾಡುವುದು ಸೂಕ್ತವೆಂದು ಕೆಲ ಮಂತ್ರಿಗಳ ಅಭಿಪ್ರಾಯ. ಆದ್ರೆ ಅನೇಕ ಸಚಿವರು ಹೈಪವರ್ ಕಮಿಟಿಯ ವರದಿ ಪ್ರಕಾರ ಪ್ರಚಾರ ನಡೆಸುವುದು ಒಳ್ಳೆಯದು ಅಂತಾ ಹೇಳಿದರು. ಸಚಿವರು ಅಭಿಪ್ರಾಯಗಳ ಬಗ್ಗೆ ಸಿಎಂ ಪ್ರತಿಕ್ರಿಯಿಸಿ, ರಾಜಧಾನಿ ಬದಲಾವಣೆ ಪ್ರಚಾರದ ಬಗ್ಗೆ ಯಾವುದೇ ಅವಸರವಿಲ್ಲ ಎಂದು ತಿಳಿಸಿದರು.
ಜೆ.ಎನ್.ರಾವ್ ಸಮಿತಿಯ ವರದಿಯ ಸಾರಾಂಶವನ್ನು ಪುರಸಭೆ ಕಾರ್ಯದರ್ಶಿ ಜೆ.ಶ್ಯಾಮಲರಾವ್ ಸಭೆಯಲ್ಲಿ ಓದಿ ತಿಳಿಸಿದರು. ಬಳಿಕ ಸಿಎಂ ಜಗನ್ ಜೆ.ಎನ್ ರಾವ್ ಸಮಿತಿಯ ವರದಿಯ ಬಗ್ಗೆ ಸಚಿವರು ಅಭಿಪ್ರಾಯವನ್ನು ತೆಗೆದುಕೊಂಡರು.
ಜೆ.ಎನ್ ರಾವ್ ವರದಿಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸಲು ಸಚಿವರು ಅಂಗೀಕರಿಸಿದ್ದಾರೆ. ಆದಷ್ಟು ಬೇಗ ರಾಜಧಾನಿ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕೆಂದು ಕೆಲವು ಸಚಿವರು ಅಭಿಪ್ರಾಯಪಟ್ಟರು. ಯಾವುದೇ ಅವಸರವಿಲ್ಲದೇ ವಿಧಿ ವಿಧಾನಗಳ ಪ್ರಕಾರ ನಿರ್ಧಾರ ತೆಗೆದುಕೊಳ್ಳಬೇಕೆಂದು ಸಚಿವರಾದ ಬೋಥಾ, ಪೂರ್ಣಿ, ಬುಗ್ಗನಾ, ಪುಷ್ಪಾ ಶ್ರೀವಾಣಿ ಸಿಎಂಗೆ ಮನವಿ ಮಾಡಿದರು.
ರೈತರ ಆಂದೋಲನ ಸರ್ಕಾರದ ಗಮನಕ್ಕೆ ಬಂದಿರುವ ವಿಷಯವನ್ನು ಅರ್ಥವಾಗುವಂತೆ ಪ್ರಜೆಗಳಿಗೆ ತಿಳಿಸಬೇಕೆಂದು ಸಚಿವರಿಗೆ ಸಿಎಂ ಸೂಚಿಸಿದರು. ಯಾವುದೇ ಅವಸರವಿಲ್ಲದೇ ರಾಜಧಾನಿ ಸಮಸ್ಯೆ ಇತ್ಯರ್ಥಗೊಳಿಸುವ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಸಚಿವರೊಬ್ಬರು ಸುದ್ದಿಗೋಷ್ಠಿ ನಡೆಸಿ, ಈ ಸಂಬಂಧ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಹಾಗೂ ನಿರ್ಧಾರವನ್ನೂ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನೊಂದೆಡೆ, ಸರ್ಕಾರದ ನಿರ್ಧಾರವನ್ನ ಪ್ರತಿಪಕ್ಷ ತೀವ್ರವಾಗಿ ಖಂಡಿಸಿದೆ. ಜಗನ್ ನಿರ್ಧಾರದ ವಿರುದ್ಧ ಚಂದ್ರಬಾಬು ನಾಯ್ಡು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಮೂರು ರಾಜಧಾನಿಗಳ ಪ್ರಸ್ತಾಪದ ವಿರುದ್ಧ ಜನರು ಆಕ್ರೋಶ ಹೊರ ಹಾಕಿದ್ದಾರೆ. ಪ್ರತಿಭಟನೆಗಳು ನಡೆಯುತ್ತಿವೆ.