ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ಮಹತ್ವದ ಸಚಿವ ಸಂಪುಟ ಸಭೆ ನಡೆಸಲಾಯಿತು. ಇದರಲ್ಲಿ ಮಹತ್ವದ ಮಿಷನ್ ಕರ್ಮಯೋಗಿ ಎಂಬ ಹೊಸ ಯೋಜನೆಗೆ ಅನುಮೋದನೆ ನೀಡಲಾಗಿದೆ. ನಾಗರಿಕ ಸೇವಾ ಅಧಿಕಾರಿಗಳಿಗೆ ಕರ್ಮಯೋಗಿ ಯೋಜನೆ ಅಡಿಯಲ್ಲಿ ವಿಶೇಷ ತರಬೇತಿ ನೀಡಲಾಗುವುದು. ನಾಗರಿಕ ಸೇವೆಗಳ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಈ ಯೋಜನೆ ಪ್ರಕಾರ ನಾಗರಿಕಾ ಸೇವಾ ಇಲಾಖೆ ಅಧಿಕಾರಿಗಳು ಇನ್ಮುಂದೆ ಕರ್ಮಯೋಗಿಗಳಾಗಿ ಸೇವೆ ಸಲ್ಲಿಸಲಿದ್ದಾರೆ. ನಾಗರಿಕಾ ಸೇವಾ ಅಧಿಕಾರಿಗಳ ಸಾಮರ್ಥ್ಯ ವೃದ್ಧಿಗೆ ಈ ರಾಷ್ಟ್ರೀಯ ಕಾರ್ಯಕ್ರಮ ಕೆಲಸ ಮಾಡಲಿದ್ದು, ಭಾರತೀಯ ಸಂಸ್ಕೃತಿ ಗಮನದಲ್ಲಿಟ್ಟುಕೊಂಡು ಅವರಿಗೆ ತರಬೇತಿ ನೀಡಲಾಗುವುದು ಎಂದು ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
ಸಚಿವ ಸಂಪುಟದ ಬಳಿಕ ಮಾತನಾಡಿದ ಅವರು, ಮಿಷನ್ ಕರ್ಮಯೋಗಿ ಭಾರತೀಯ ನಾಗರಿಕಾ ಸೇವಾ ಅಧಿಕಾರಿಗಳನ್ನ ಹೆಚ್ಚು ಸೃಜನಶೀಲ, ರಚನಾತ್ಮಕ, ಪ್ರಗತಿಪರ, ಪಾರದರ್ಶಕ ಮತ್ತು ತಂತ್ರಜ್ಞಾನ ವಿಷಯದಲ್ಲಿ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಗೊಳಿಸುವುದಾಗಿದೆ ಎಂದು ಹೇಳಿದ್ದಾರೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಇದಕ್ಕಾಗಿ ಮಹತ್ವದ ಯೋಜನೆ ರೂಪಿಸಿಕೊಳ್ಳಲಿದೆ ಎಂದು ಅವರು ಹೇಳಿದರು.ಮಿಷನ್ ಕರ್ಮಯೋಗಿ ವೈಯಕ್ತಿಕವಾಗಿ ಪ್ರತಿ ಅಧಿಕಾರಿ ಸಾಮರ್ಥ್ಯದ ಮೇಲೆ ಕೆಲಸ ಮಾಡಲಿದ್ದು, ಪ್ರಧಾನಮಂತ್ರಿಯವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ತಜ್ಞರು ಇಲ್ಲಿ ಕೆಲಸ ಮಾಡಲಿದ್ದಾರೆ.