ನವದೆಹಲಿ: ಪಟಾಕಿ ತುಂಬಿದ್ದ ಅನಾನಸ್ ನೀಡಿ ಗರ್ಭಿಣಿ ಆನೆ ಹತ್ಯೆ ಮಾಡಿರುವ ಘಟನೆ ಕೇರಳದ ಪಾಲಕ್ಕಾಡ್‌ನಲ್ಲಿ ನಡೆದಿದ್ದು, ಅದಕ್ಕೆ ಎಲ್ಲೆಡೆಯಿಂದ ಇನ್ನಿಲ್ಲದ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಫ್ಐಆರ್ ಕೂಡ ದಾಖಲು ಮಾಡಿಕೊಳ್ಳಲಾಗಿದೆ.
ಗರ್ಭಿಣಿ ಆನೆಗೆ ಪಟಾಕಿ ತುಂಬಿದ್ದ ಅನಾನಸ್ ನೀಡಿದ ಕಿಡಿಗೇಡಿಗಳು..ನೀರಿನಲ್ಲೇ ದಾರುಣ ಸಾವು!
ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ಕೈಗಾರಿಕೋದ್ಯಮಿ ರತನ್ ಟಾಟಾ ಕೂಡ ಟ್ವೀಟ್ ಮಾಡಿ ತಮ್ಮ ದುಃಖ ಹೊರಹಾಕಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಕೆಲ ಜನರು ಮುಗ್ಧ, ಗರ್ಭಿಣಿ ಆನೆಗೆ ಪಟಾಕಿ ತುಂಬಿದ್ದ ಅನಾನಸ್ ನೀಡಿ ಹತ್ಯೆ ಮಾಡಿರುವ ಸುದ್ದಿ ಕೇಳಿ ನಾನು ಆಘಾತಕ್ಕೊಳಗಾಗಿದ್ದೇನೆ. ಮುಗ್ಧ ಪ್ರಾಣಿಗಳ ವಿರುದ್ಧ ಇಂತಹ ಅಪರಾದ ಕೃತ್ಯ ಮನುಷ್ಯನನ್ನು ಚಿಂತನಶೀಲವಾಗಿ ಕೊಲ್ಲುವುದಕ್ಕಿಂತಲೂ ಭಿನ್ನವಾಗಿಲ್ಲ ಎಂದು ಟ್ವೀಟ್ ಮಾಡಿದ್ದು, ಕೃತ್ಯ ವೆಸಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಅನುಷ್ಕಾ ಶರ್ಮಾ, ಶ್ರದ್ಧಾ ಕಪೂರ್, ರಂದೀಪ್ ಹೂಡಾ ಸೇರಿದಂತೆ ಅನೇಕರು ಪ್ರಾಣಿಗಳ ವಿರುದ್ಧ ಈ ರೀತಿಯ ಕೃತ್ಯವೆಸಗುವವರ ವಿರುದ್ಧ ಕಠಿಣ ಕ್ರಮ ಹಾಗೂ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಒತ್ತಾಯಿಸಿ ಟ್ವೀಟ್ ಮಾಡಿದ್ದಾರೆ.