ಬುಲಂದ್ಶಹರ್ (ಉತ್ತರ ಪ್ರದೇಶ): ಹಥ್ರಾಸ್ನಲ್ಲಿ ಯುವತಿ ಮೇಲಿನ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ಇಲ್ಲಿನ ಬುಲಂದ್ಶಹರ್ನಲ್ಲಿ 14 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಸದ್ಯ ಈ ಪ್ರಕರಣದಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದರು.
ಇದಲ್ಲದೆ ಆರೋಪಿ ಮೇಲಿನ ದೂರು ಹಿಂಪಡೆಯುವಂತೆ ಸಂತ್ರಸ್ತೆಯ ಕುಟುಂಬಸ್ಥರ ಮೇಲೆ ಆರೋಪಿಯ ಕುಟುಂಬಸ್ಥರು ಒತ್ತಡ ಹೇರಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅತ್ಯಾಚಾರ ಕೇಸ್ ಅನ್ನು ರಾಜಿ ಮಾಡಿಕೊಂಡು ಇತ್ಯರ್ಥ ಮಾಡಿಕೊಳ್ಳುವಂತೆ ಆರೋಪಿಯ ಕುಟುಂಬಸ್ಥರು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಂತ್ರಸ್ತೆಯ ಕುಟುಂಬದ ಸದಸ್ಯರ ಪ್ರಕಾರ, ನೆರೆಮನೆಯಲ್ಲಿ ವಾಸಿಸುತ್ತಿದ್ದ ವ್ಯಕ್ತಿ ಅಪ್ರಾಪ್ತೆಗೆ ಯಾವುದೋ ಮಾದಕ ವಸ್ತು ನೀಡಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದಿದ್ದಾರೆ. ಸಂತ್ರಸ್ತೆಯ ತಂದೆ ಮರಗೆಲಸ ಮಾಡುವನಾಗಿದ್ದು, 5 ಮಕ್ಕಳನ್ನು ಹೊಂದಿರುವ ಕುಟುಂಬ ಬಡತನ ಎದುರಿಸುತ್ತಿದೆ. ಇದನ್ನೇ ಲಾಭ ಮಾಡಿಕೊಳ್ಳಲು ಹೊರಟಿರುವ ಆರೋಪಿಯ ಕುಟುಂಬಸ್ಥರು ಹಣದ ಆಮಿಷ ಒಡ್ಡುತ್ತಿದ್ದಾರೆ ಎನ್ನಲಾಗಿದೆ.
ಈ ಕುರಿತಂತೆ ಈಟಿವಿ ಭಾರತದ ಜತೆ ಮಾತನಾಡಿದ ಸಂತ್ರಸ್ತೆಯ ತಂದೆ, ನಾವು ನ್ಯಾಯ ಭಯಸುತ್ತೇವೆ, ನಮಗೆ ಪೊಲೀಸ್ ಹಾಗೂ ಕಾನೂನಿನ ಮೇಲೆ ನಂಬಿಕೆಯಿದೆ. ಅಲ್ಲದೆ ನಮಗೆ ಪೊಲೀಸರು ತೆಗೆದುಕೊಂಡ ನಿರ್ಧಾರದ ಬಗ್ಗೆಯೂ ತೃಪ್ತಿ ಇದೆ. ಆರೋಪಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸುತ್ತೇವೆ ಎಂದಿದ್ದಾರೆ.
ಇನ್ನೂ ಸಿಖಂದರಾಬಾದ್ ಪೊಲೀಸ್ ಅಧಿಕಾರಿ ನಮೃತಾ ಶ್ರೀವತ್ಸವ ಮಾತನಾಡಿ, ಈ ಪ್ರಕರಣದಲ್ಲಿ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಲಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ ಎಂದಿದ್ದಾರೆ.