ನವದೆಹಲಿ:ಸೆಲ್ಫೋನ್, ಸೆಮಿ ಕಂಡಕ್ಟರ್ ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ತಯಾರಿಸುವ ಯೋಜನೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ.
ದೇಶಿಯ ಉತ್ಪಾದನೆಯನ್ನು ಹೆಚ್ಚಿಸುವ ಮತ್ತು ಎಲೆಕ್ಟ್ರಾನಿಕ್ ಉತ್ಪಾದನೆಯಲ್ಲಿ ಹೂಡಿಕೆಯನ್ನು ಆಕರ್ಷಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ಮೋದಿ ಸರ್ಕಾರವು ಹಣಕಾಸು ವರ್ಷದ ಈ ಮೊದಲ ಸಂಪೂರ್ಣ ಬಜೆಟ್‌ನಲ್ಲಿ ತನ್ನ ಎರಡನೇ ಅವಧಿಯಲ್ಲಿ ಪ್ರತಿ ವಲಯಕ್ಕೂ ಏನನ್ನಾದರೂ ನೀಡಲು ಪ್ರಯತ್ನಿಸುತ್ತಿದೆ.
ನೈಸರ್ಗಿಕ ಅನಿಲ ಪೈಪ್‌ಲೈನ್ ಗ್ರಿಡ್ ಅನ್ನು ಈಗಿನ 16,000 ಕಿ.ಮೀ. ನಿಂದ 27,000 ಕಿ.ಮೀ. ಗೆ ವಿಸ್ತರಿಸಲಾಗುವುದು. 2020-21ರಲ್ಲಿ ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ 22,000 ಕೋಟಿ ಮೀಸಲಿಡಲಾಗುವುದು. 2020-21ರಲ್ಲಿ ಸಾರಿಗೆ ಮೂಲಸೌಕರ್ಯಕ್ಕಾಗಿ 1.7 ಲಕ್ಷ ಕೋಟಿ ರೂ. ಒದಗಿಸಲಾಗಿದೆ ಎಂದರು.
18,600 ಕೋಟಿ ಬೆಂಗಳೂರು ಸಬ್ ಅರ್ಬನ್ ರೈಲ್ವೆ ಯೋಜನೆಯನ್ನು ಆರಂಭಿಸಲಾಗುವುದು. ವಿದ್ಯುತ್ ಮತ್ತು ನವೀಕರಣ ವಲಯಕ್ಕೆ 22,000 ಕೋಟಿ ರೂ. ಹಂಚಿಕೆ ಮಾಡಲಾಗುವುದು. ಮುಂದಿನ ಮೂರು ವರ್ಷಗಳಲ್ಲಿ ಸ್ಮಾರ್ಟ್ ಮೀಟರ್‌ಗಳನ್ನು ಸಾಂಪ್ರದಾಯಿಕ ಮೀಟರ್‌ಗಳಿಂದ ಬದಲಾಯಿಸಲಾಗುವುದು ಎಂದು ಸೀತಾರಾಮನ್ ಹೇಳಿದ್ದಾರೆ.