ನವದೆಹಲಿ : ಮುಂದಿನ ಉತ್ತರಪ್ರದೇಶದ ಎಂಎಲ್‌ಸಿ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ (ಎಸ್‌ಪಿ) ಎರಡನೇ ಅಭ್ಯರ್ಥಿಯನ್ನು ಸೋಲಿಸಲು ನಮ್ಮ ಪಕ್ಷ ಭಾರತೀಯ ಭಾರತೀಯ ಪಕ್ಷ (ಬಿಜೆಪಿ) ಅಥವಾ ಯಾವುದೇ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಲಿದೆ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.
ಮಾಧ್ಯಮ ಸಂಸ್ಥೆಯೊಂದಕ್ಕೆ ಹೇಳಿಕೆ ನೀಡಿರುವ ಮಾಯಾವತಿ, "ಉತ್ತರ ಪ್ರದೇಶದಲ್ಲಿ ಮುಂದಿನ ಪರಿಷತ್ ಚುನಾವಣೆಯಲ್ಲಿ ಎಸ್‌ಪಿ ಅಭ್ಯರ್ಥಿಯನ್ನು ಸೋಲಿಸಲು ನಾವು ನಿರ್ಧರಿಸಿದ್ದೇವೆ. ಈ ನಿಟ್ಟಿನಲ್ಲಿ ನಮ್ಮೆಲ್ಲರ ಬಲ ಪ್ರಯೋಗಿಸುತ್ತೇವೆ. ನಮ್ಮ ಮತವನ್ನು ಬಿಜೆಪಿ ಅಭ್ಯರ್ಥಿಗೆ ಅಥವಾ ಯಾವ ಪಕ್ಷದ ಅಭ್ಯರ್ಥಿಗೆ ಬೇಕಾದರೂ ನೀಡುತ್ತೇವೆ. ಸಮಾಜವಾದಿ ಪಕ್ಷದ 2ನೇ ಅಭ್ಯರ್ಥಿಯ ಮೇಲೆ ಪ್ರಾಬಲ್ಯ ಹೊಂದಿರುವ ಯಾವುದೇ ಪಕ್ಷದ ಅಭ್ಯರ್ಥಿ, ಬಿಎಸ್‌ಪಿ ಶಾಸಕರ ಮತವನ್ನು ಖಚಿತವಾಗಿ ಪಡೆಯುತ್ತಾರೆ" ಎಂದು ಮಾಯಾವತಿ ಹೇಳಿದ್ದಾರೆ.
ಬಿಎಸ್‌ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಾ ಅವರನ್ನು ಅವಮಾನಿಸುವ ಮೂಲಕ ಎಸ್‌ಪಿ, ಉತ್ತರ ಪ್ರದೇಶದ ಬ್ರಾಹ್ಮಣ ಸಮುದಾಯವನ್ನು ಅವಮಾನಿಸಿದೆ ಎಂದು ಮಾಯಾವತಿ ಪ್ರತಿಪಾದಿಸಿದರು.
1995 ರ ಸಮಾಜವಾದಿ ಪಕ್ಷದ (ಎಸ್‌ಪಿ) ವಿರುದ್ಧದ ಪ್ರಕರಣವನ್ನು ಕೈಬಿಟ್ಟಿರುವುದು ದೊಡ್ಡ ತಪ್ಪು ಎಂದು ಮಾಯಾವತಿ ಹೇಳಿದ್ದಾರೆ. ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಸಮಾಜವಾದಿ ಪಕ್ಷದ ವರ್ತನೆ ಬದಲಾಗಿದ್ದು, 1995ರ ಜೂನ್ 2ರ ಪ್ರಕರಣ ಹಿಂಪಡೆದು ದೊಡ್ಡ ತಪ್ಪು ಮಾಡಿದ್ದೇವೆ ಎಂದು ಅರಿತುಕೊಂಡಿರುವುದಾಗಿ ತಿಳಿಸಿದ್ದಾರೆ. "ನಾವು ಅವರೊಂದಿಗೆ ಕೈಜೋಡಿಸಬಾರದಿತ್ತು. ಸ್ವಲ್ಪ ಆಳವಾಗಿ ಯೋಚಿಸಬೇಕಾಗಿತ್ತು. ತರಾತುರಿಯಲ್ಲಿ ತಪ್ಪು ನಿರ್ಧಾರ ತೆಗೆದುಕೊಂಡಿದ್ದೇವೆ" ಎಂದು ಹೇಳಿದ್ದಾರೆ.
"ಲೋಕಸಭಾ ಚುನಾವಣೆಯ ಸಮಯದಲ್ಲಿ ಕೋಮುವಾದಿ ಪಡೆಗಳ ವಿರುದ್ಧ ಹೋರಾಡಲು ನಮ್ಮ ಪಕ್ಷ ಎಸ್‌ಪಿ ಜೊತೆ ಕೈಜೋಡಿಸಿತ್ತು. ಅವರ ಕುಟುಂಬ ಜಗಳದಿಂದಾಗಿ, ಅವರು ಬಿಎಸ್‌ಪಿಯೊಂದಿಗಿನ ಮಹಾಘಟಬಂಧನ್ನಿಂದ ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗಲಿಲ್ಲ. ಚುನಾವಣೆಯ ನಂತರದ ಅವರು ನಮಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದರು, ಆದ್ದರಿಂದ ನಾವು ಅವರಿಂದ ದೂರ ಸರಿಯಲು ನಿರ್ಧರಿಸಿದೆವು" ಎಂದು ಹೇಳಿದ್ದಾರೆ.
1995ರ ಪ್ರಕರಣವೇನು?
ಎಸ್‌ಪಿ-ಬಿಎಸ್‌ಪಿ ಸಮ್ಮಿಶ್ರ ಸರ್ಕಾರ ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿದ್ದಾಗ 1995 ರ ಜೂನ್ 2 ರಂದು ರಾಜ್ಯ ಅತಿಥಿಗೃಹದಲ್ಲಿ ಸಭೆ ನಡೆಯುತಿತ್ತು. ಪಕ್ಷದ ಶಾಸಕರೊಂದಿಗೆ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಮಾಯಾವತಿ ಮೇಲೆ ಎಸ್‌ಪಿ ಪಕ್ಷದ ನಾಯಕ ಹಲ್ಲೆ ನಡೆಸಿದ್ದರು. ನಂತರ ಮಯಾವತಿ ಮತ್ತು ಶಾಸಕರಿದ್ದ ಕೋಣೆಗೆ ಬೀಗ ಹಾಕಿದ್ದರು.