ನವದೆಹಲಿ: ದೇಶದ ಅತಿ ದೊಡ್ಡ ಹಾಗೂ ಸುರಕ್ಷಿತ ಜೈಲೆಂದು ಹೆಸರಾದ ತಿಹಾರ್ ಜೈಲಿನಲ್ಲಿ ಕೈದಿಯೊಬ್ಬ ಮತ್ತೋರ್ವ ಕೈದಿಯ ಕೊಲೆ ಮಾಡಿದ್ದಾನೆ. ತನ್ನ ಸಹೋದರಿ ಮೇಲೆ ಅತ್ಯಾಚಾರವೆಸಗಿದ್ದ ಮತ್ತೋರ್ವ ಕೈದಿ ಮೆಹತಾಬ್ ಖಾನ್ನ ಹೊಟ್ಟೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ತಿಹಾರದ 8 ನೇ ನಂಬರಿನ ಜೈಲಿನಲ್ಲಿ ಬೆಳಗಿನ ಜಾವ ಎಲ್ಲ ಕೈದಿಗಳು ಪ್ರಾರ್ಥನೆಗೆ ಹೊರಟಿದ್ದ ವೇಳೆ ಈ ಘಟನೆ ನಡೆದಿದೆ. ಕೈದಿಗಳೆಲ್ಲ ಪ್ರಾರ್ಥನೆಗಾಗಿ ಸೆಲ್ಗಳಿಂದ ಹೊರಬರುವಾಗ ಸಂತ್ರಸ್ತೆಯ ಸಹೋದರನಾಗಿರುವ ಕೈದಿಯು ನೆಲಮಹಡಿಯಿಂದ ಮೊದಲ ಮಹಡಿಗೆ ಹೋಗಿ ತಾನೇ ತಯಾರಿಸಿಟ್ಟುಕೊಂಡಿದ್ದ ಚಾಕುವಿನಿಂದ ಅತ್ಯಾಚಾರದ ಆರೋಪಿಯಾದ ಮೆಹತಾಬ್ನ ಹೊಟ್ಟೆಗೆ ಚುಚ್ಚಿ ಕೊಂದಿದ್ದಾನೆ.