ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿ ಡಿ. ವೈ ಚಂದ್ರಚೂಡ್ ನೇತೃತ್ವದ ಪೀಠ, ಯಾವುದೇ ವಯಸ್ಕ ವ್ಯಕ್ತಿಯು ಸಂತ್ರಸ್ತ ಮಹಿಳೆಯೊಂದಿಗೆ ಯಾವುದೇ ಕೌಟುಂಬಿಕ ಸಂಬಂಧ ಹೊಂದಿದ್ದೇ ಆದಲ್ಲಿ ಆತನಿಗೆ ಕಾಯ್ದೆಯಿಂದ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ವಿಶ್ಲೆಷಣೆ ಮಾಡಿದೆ.
ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯ ಪ್ರಕಾರ, ಸಂತ್ರಸ್ತ ಪತ್ನಿ ಅಥವಾ ಪುರುಷನೊಂದಿಗೆ ಲಿವಿಂಗ್ ಇನ್ ಸಂಬಂಧ ಹೊಂದಿರುವ ಮಹಿಳೆ ಪರಿಹಾರಕ್ಕೋಸ್ಕರ ಗಂಡ ಅಥವಾ ಆತನ ಸಂಬಂಧಿಕರ ವಿರುದ್ಧ ದೂರು ಸಲ್ಲಿಸಬಹುದಾಗಿದೆ.
ಇದೇ ಕಾಯ್ದೆಯ ಸೆಕ್ಷನ್ 2(ಎಫ್) ಪ್ರಕಾರ, ಕೌಟುಂಬಿಕ ಸಂಬಂಧ ವೆಂದರೆ, ಇಬ್ಬರು ವ್ಯಕ್ತಿಗಳು ಯಾವುದೇ ಸಮಯದವರೆಗೆ ಒಟ್ಟಿಗೆ ಒಂದೇ ಮನೆಯಲ್ಲಿ ಮದುವೆ ಅಥವಾ ಇತರ ಲಿವಿಂಗ್ ಇನ್ ರೀತಿ ಜೀವನ ನಡೆಸುತ್ತಿದ್ದು, ದತ್ತು ಅಥವಾ ಅವಿಭಕ್ತ ಕುಟುಂಬದಲ್ಲಿದ್ದು ವಾಸಿಸುವುದೇ ಆಗಿದೆ.
ಪಾಣಿಪತ್ ಪ್ರಕರಣದ ಹಿನ್ನೆಲೆ:
ಅವಿಭಕ್ತ ಕುಟುಂಬವೊಂದರ ವಿವಾಹಿತ ಸಹೋದರರು, ಪಾಣಿಪತ್ ನಲ್ಲಿ ಜೀವನ ನಿರ್ವಹಣೆಗೆ ಕಿರಾಣಿ ಅಂಗಡಿ ನಡೆಸುತ್ತಿದ್ದರು. ಈ ಅಂಗಡಿಯಿಂದ ಬಂದ ಆದಾಯವನ್ನು ಇಬ್ಬರೂ ಸೇರಿ ಸಮನಾಗಿ ಹಂಚಿಕೊಳ್ಳುತ್ತಿದ್ದರು. ಕೆಲ ತಿಂಗಳ ಹಿಂದೆ ಸಹೋದರರಲ್ಲಿ ಒಬ್ಬಾತ ಮೃತಪಟ್ಟಿದ್ದಾನೆ. ಸಹಜವಾಗಿಯೇ ಆತನ ಪತ್ನಿ ಜೀವನಾಂಶ ನೀಡುವಂತೆ ಕೇಳಿದ್ದಾರೆ. ಇದಕ್ಕೆ ಸಹೋದರ ಸಹಮತ ವ್ಯಕ್ತಪಡಿಸದ ಹಿನ್ನೆಲೆಯಲ್ಲಿ ಆಕೆ ಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್, ಗಂಡನ ಸಹೋದರ ಪ್ರತಿ ತಿಂಗಳು ಅಣ್ಣನ ಪತ್ನಿಗೆ 4,000 ರೂಪಾಯಿ ಹಾಗು ಸೊಸೆಗೆ ಪ್ರತಿ ತಿಂಗಳು 2,000 ರೂಪಾಯಿ ಹಣ ಕೊಡಬೇಕು ಎಂದು ಇತ್ತೀಚೆಗೆ ಮಧ್ಯಂತರ ಆದೇಶ ಹೊರಡಿಸಿತ್ತು. ಈ ಆದೇಶದ ಪ್ರಶ್ನಿಸಿದ ಸಹೋದರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿದ್ದರು. ಈ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಅರ್ಜಿ ವಜಾ ಮಾಡಿದೆ.