ಲೇಹ್ (ಲಡಾಖ್): ಭಾರತ-ಚೀನಾ ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿಯ ಮಧ್ಯೆ, ಲೇಹ್ - ಲಡಾಖ್ ಪ್ರದೇಶದಲ್ಲಿನ 'ನಿಮ್ಮು-ಪದಮ್-ದಾರ್ಚಾ' ಎಂದು ಕರೆಯಲಾಗುವ ರಸ್ತೆ ಕಾಮಗಾರಿಯನ್ನು ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ಬಹುತೇಕ ಪೂರ್ಣಗೊಳಿಸಿದೆ.
ಈ ಹಿಂದೆ ನಿರ್ಮಿಸಿದ ಶ್ರೀನಗರ-ಕಾರ್ಗಿಲ್-ಲೇಹ್ ಮತ್ತು ಮನಾಲಿ ಸರ್ಚು-ಲೇಹ್ ರಸ್ತೆಗಳು ಅಂತಾರಾಷ್ಟ್ರೀಯ ಗಡಿಗೆ ಹತ್ತಿರದಲ್ಲಿರುವುದರಿಂದ ಶತ್ರು ರಾಷ್ಟ್ರಗಳು ಇವುಗಳ ಮೇಲೆ ನಿಗಾ ಇಡುತ್ತಿದ್ದವು. ಆದರೆ ನಿಮ್ಮು-ಪದಮ್-ದಾರ್ಚಾ ರಸ್ತೆಯು ಭದ್ರತಾ ಪಡೆಗಳಿಗೆ ಲಡಾಖ್ನಿಂದ ದಾರ್ಚಾಗೆ ಸಂಪರ್ಕಿಸುವ ಕಾರ್ಯತಂತ್ರದ ಹೆದ್ದಾರಿಯಾಗಿದೆ. ಈ ರಸ್ತೆ ಯಾವುದೇ ಗಡಿಗೆ ಹತ್ತಿರದಲ್ಲಿಲ್ಲ, ಹೀಗಾಗಿ ನೆರೆಯ ರಾಷ್ಟ್ರಗಳು ಈ ಮಾರ್ಗ ಪತ್ತೆ ಹಚ್ಚಲು ಸಾಧ್ಯವಿಲ್ಲ.
ಇದಲ್ಲದೆ, ಮನಾಲಿಯಿಂದ ಲೇಹ್ ತಲುಪಲು ಹಳೆಯ ಎರಡು ರಸ್ತೆ ಮಾರ್ಗಗಳು ಸುಮಾರು 12-14 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಈ ರಸ್ತೆ ಮೂಲಕ ಕೇವಲ 6-7 ಗಂಟೆಗಳಲ್ಲಿ ತಲುಪಬಹುದಾಗಿದ್ದು, ಸಾಕಷ್ಟು ಸಮಯವನ್ನು ಉಳಿಸುತ್ತದೆ,
ಈ ರಸ್ತೆಯ ಇನ್ನೊಂದು ವಿಶೇಷವೆಂದರೆ ಇದು ವರ್ಷದ 365 ದಿನಗಳ ಕಾಲವೂ ತೆರೆದಿರುತ್ತದೆ. ಆದರೆ ಆ ಎರಡು ರಸ್ತೆಗಳು ಕೇವಲ 6-7 ತಿಂಗಳುಗಳವರೆಗೆ ಮಾತ್ರ ತೆರೆದಿರುತ್ತವೆ ಹಾಗೂ ನವೆಂಬರ್‌ನಿಂದ ಆರು ತಿಂಗಳ ಅವಧಿಗೆ ಮುಚ್ಚಲ್ಪಡುತ್ತವೆ.
258 ಕಿಲೋ ಮೀಟರ್ ಉದ್ದದ ರಸ್ತೆ ಇದಾಗಿದ್ದು, ಕೇವಲ 30 ಕಿಲೋ ಮೀಟರ್ ವ್ಯಾಪ್ತಿಯ ಕಾಮಗಾರಿ ಮಾತ್ರ ಬಾಕಿಯಿದೆ. ಉಳಿದಂತೆ ಎಲ್ಲಾ ಕೆಲಸ ಮುಕ್ತಾಯವಾಗಿದೆ. ಬೃಹತ್ ಪ್ರಮಾಣದ ರಕ್ಷಣಾ ಉಪಕರಣಗಳನ್ನು ಹೊರುವ ಭಾರೀ ವಾಹನಗಳ ಸಂಚಾರಕ್ಕೆ ಈ ರಸ್ತೆ ಈಗ ಸಿದ್ಧವಾಗಿದೆ ಎಂದು ಬಿಆರ್‌ಒ ಇಂಜಿನಿಯರ್‌ಗಳು ತಿಳಿಸಿದ್ದಾರೆ.