ಕರ್ನಾಟಕ

karnataka

ETV Bharat / bharat

'ದಾದಾಗಿರಿ, ಹಣ ಮತ್ತು ಮುತ್ತಪ್ಪ ರೈ ಬಿಟ್ಟು ಹೋದ ಪಾಠ'! - brief information about Muthappa Rai

ಮುತ್ತಪ್ಪ ರೈ ಇನ್ನಿಲ್ಲ. ಒಬ್ಬ ವ್ಯಕ್ತಿ ಇನ್ನಿಲ್ಲವಾಗುವುದೆಂದರೆ ಆತ ಭೌತಿಕವಾಗಿ ಈ ಲೋಕದಿಂದ ನಿರ್ಗಮಿಸುವುದಷ್ಟೆ ಅಲ್ಲ, ಆತ ಬಿಟ್ಟುಹೋದ ನೆನಪುಗಳು ಎಷ್ಟು ಜನರ ಎದೆಯಲ್ಲಿ ಕಣ್ಣೀರು ಉಕ್ಕಿಸುತ್ತವೆ ಅಥವಾ ಎಷ್ಟು ಜನರ ಮನದಲ್ಲಿ ನಿಟ್ಟುಸಿರುಗರೆಯುತ್ತವೆ ಎಂಬುದನ್ನು ಅವಲಂಬಿಸಿರುತ್ತೆ. ಇದು ಇತ್ತೀಚೆಗೆ ಅಗಲಿದ ಮಾಜಿ ಅಂಡರ್​ ವರ್ಲ್ಡ್ ಡಾನ್​ ಮುತ್ತಪ್ಪ ಕುರಿತು ನಿವೃತ್ತ ಡಿಐಜಿಪಿ ಡಾ. ರಾಜಪ್ಪ ಅವರು ಕೆಲವು ವಿಚಾರಗಳನ್ನು ಕುರಿತು ಬರೆದಿದ್ದಾರೆ.

Muthappa Rai
ಮುತ್ತಪ್ಪ ರೈ

By

Published : May 23, 2020, 5:35 PM IST

Updated : May 23, 2020, 5:46 PM IST

ಇತ್ತೀಚೆಗೆ ಅಗಲಿದ ಮಾಜಿ ಅಂಡರ್​ ವರ್ಲ್ಡ್ ಡಾನ್​ ಮುತ್ತಪ್ಪ ಕುರಿತು ನಿವೃತ್ತ ಡಿಐಜಿಪಿ ಡಾ. ರಾಜಪ್ಪ ಅವರು ಕೆಲವು ವಿಚಾರಗಳನ್ನು ಕುರಿತು ಬರೆದಿದ್ದಾರೆ. ಅವರ ಲೇಖನದ ಸಂಪೂರ್ಣ ಸಾರಾಂಶ ಇಲ್ಲಿದೆ...

'ಬದುಕಿನ ಕೊನೆಗಾಲದಲ್ಲಿ ಒಂಟಿ ಕೋಟೆಯಂತಹ ಮನೆಯಲ್ಲಿ ಬಂಧಿಯಾಗಿ, ಜಯ ಕರ್ನಾಟಕ ಎಂಬ ಸಂಘಟನೆಯ ಮತ್ತೊಂದು ಸೋಗಿನ ಕೋಟೆಯಲ್ಲಿ ಬೆಚ್ಚಗಿದ್ದ ಮುತ್ತಪ್ಪ ರೈ ಹೆಜ್ಜೆಹೆಜ್ಜೆಗು ಸಾವಿನ ಭೀತಿಯಲ್ಲೇ ಬದುಕಿದ್ದು ಸುಳ್ಳಲ್ಲ. ಮುತ್ತಪ್ಪ ರೈ ಅನ್ನು ಬಲಿ ತೆಗೆದುಕೊಂಡ ಕ್ಯಾನ್ಸರ್ ಎಂಬ ವ್ಯಾಧಿ ಬಗೆಗಿನ ಭೀತಿ ಮಾತ್ರವಲ್ಲ, ಆತನದೇ ಪಾತಕ ಬದುಕಿನ ಕರಾಳ ಕುರುಹುಗಳು ಬಿಟ್ಟೂಬಿಡದೆ ಕಾಡುತ್ತಿದ್ದ ಭಯ. ಇಂಥಾ ಭಯದ ನೆರಳಲ್ಲೇ ಇನ್ನಿಲ್ಲವಾದ ಮುತ್ತಪ್ಪ ರೈ ವಿದಾಯಕ್ಕೆ ಕಣ್ಣೀರಿಗಿಂತ ಹೆಚ್ಚಾಗಿ ನಿಟ್ಟುಸಿರುಗಳೇ ಹರಿದಾಡಿದ್ದರೆ ಅದರಲ್ಲಿ ಅಚ್ಚರಿಯೇನು ಇಲ್ಲ. ಬದುಕಿನ ವಿಪರ್ಯಾಸ ನೋಡಿ, ಆರಂಭದಲ್ಲಿ ಹಣದ ಬೆನ್ನುಬಿದ್ದ ಮುತ್ತಪ್ಪ ರೈ ಜನರನ್ನು ಸುಲಿದು ಕ್ರಿಮಿನಲ್ ರೂಪಾಂತರಿಯಾದರು. ಕೊನೆಗೆ ಅದೇ ಹಣವನ್ನು ಚೆಲ್ಲಾಡಿ ಸಮಾಜ ಸೇವಕ ಎಂಬ ಸೋಗಿಗೆ ಪರದಾಡಬೇಕಾಯ್ತು. ಅದು ತನ್ನ ಜೀವ ಉಳಿಸಿಕೊಳ್ಳಲು. ಹಣ ಒಬ್ಬ ಮನುಷ್ಯನ ಬದುಕಿನಲ್ಲಿ ಹೇಗೆಲ್ಲಾ ಆಟವಾಡುತ್ತದೆ ಅನ್ನೋದಕ್ಕೆ ರೈ ಬದುಕಿಗಿಂತ ಮತ್ತೊಂದು ನಿದರ್ಶನ ಬೇಕೆ?. ರೌಡಿಸಂ, ಗೂಂಡಾಗಿರಿ, ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿ ಹಣದ ಬೆನ್ನು ಬಿದ್ದವರು ಕೊನೆಗದು ತಮಗೆ ದಕ್ಕದು ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕಿದೆ. ಸಾವಿನ ಹಾಸಿಗೆಯಲ್ಲಿ ಮುತ್ತಪ್ಪ ರೈ ಹಪಹಪಿಸಿದ್ದು ಹಣಕ್ಕಾಗಿ ಅಲ್ಲ, ಕಿಂಚಿತ್ತು ನೆಮ್ಮದಿಗಾಗಿ. ಆದರದು ಆತನಿಗೆ ದಕ್ಕಲಿಲ್ಲ.

ಮುತ್ತಪ್ಪ ರೈ

ಒಬ್ಬ ಪೊಲೀಸ್ ಅಧಿಕಾರಿಯಾಗಿದ್ದವನಾಗಿ, ಪಾತಕ ಲೋಕದ ಮುತ್ತಪ್ಪನನ್ನು ಇದಕ್ಕಿಂತಲು ಹೆಚ್ಚು ವಿನಾಯ್ತಿ ಕೊಟ್ಟು ನೋಡಲು ನನ್ನಿಂದ ಸಾಧ್ಯವಿಲ್ಲ. ಯಾಕೆಂದರೆ, ಬದುಕಿನ ಮುಸ್ಸಂಜೆಯಲ್ಲಿ ಆತ ತೊಟ್ಟ ಸಮಾಜ ಸೇವಕನ ವೇಷಕ್ಕಿಂತಲು, ಜೀವನವಿಡೀ ಆತ ಸಮಾಜಕ್ಕೆ ಕೊಟ್ಟ ಕಾಟ, ಕೋಟಲೆಗಳೆ ನಮ್ಮ ಖಾಕಿ ನೆನಪುಗಳಿಂದ ಪುಟಿದೆದ್ದು ಬರುತ್ತವೆ.

ಮುತ್ತಪ್ಪ ರೈನನ್ನು ನಾನು ಮೊದಲು ಅಧಿಕೃತವಾಗಿ ಮುಖಾಮುಖಿಯಾದದ್ದು 2003ರಲ್ಲಿ. ಅದೂ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ. ಪ್ರಕರಣವೊಂದರಲ್ಲಿ ಸಾಕ್ಷಿ ನುಡಿಯಲು ನಾನು ಅಲ್ಲಿಗೆ ಹೋಗಿದ್ದಾಗ ತನ್ನ ಕೇಸಿನ ವಿಚಾರಣೆಗಾಗಿ ಮುತ್ತಪ್ಪ ರೈ ಕೂಡಾ ಹಾಜರಾಗಿದ್ದ. ನನ್ನನ್ನು ಕಂಡು ಆತ ನಮಸ್ಕಾರ ಹೇಳುತ್ತಿದ್ದರೆ, ನನ್ನ ಮನಸಿನಲ್ಲಿ ಅಲ್ಲಿಗೆ ಎಂಟು ವರ್ಷಗಳ ಹಿಂದಿನ ಘಟನೆಯೊಂದು ಸಣ್ಣಗೆ ಮಗ್ಗಲು ಬದಲಿಸಿ, ಮೈಮುರಿಯುತ್ತಿತ್ತು. 1995ರಲ್ಲಿ ನಾನು ಮಂಗಳೂರಿನ ಪಣಂಬೂರಿನಲ್ಲಿ ಡಿ.ಎಸ್.ಪಿ. ಅಗಿದ್ದಾಗಿನ ಘಟನೆ ಅದು. ಆ ವರ್ಷ ಫೆಬ್ರವರಿಯಲ್ಲಿ ಮುತ್ತಪ್ಪ ರೈ ಮೇಲೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಟಾಡಾ ಕಾಯ್ದೆ ಅಡಿ ಪ್ರಕರಣ ದಾಖಲಾಗಲು ಎಲ್ಲಾ ತಯಾರಿಗಳು ನಡೆದಿದ್ದವು. ಆಗ ಮಂಗಳೂರಿಗೆ ಶ್ರೀ ಎ.ಎಂ. ಪ್ರಸಾದ್ ರವರು ಎಸ್​ಪಿಯಾಗಿದ್ದರೆ, ಪಿ.ಎಚ್. ಠಾಣೆಯವರು ಅಡಿಷನಲ್ ಎಸ್.ಪಿ.ಯಾಗಿದ್ದರು. ಮಂಗಳೂರಿನಲ್ಲಿ ಅಂಡರ್ ವರ್ಲ್ಡ್ ಚಟುವಟಿಕೆಗಳು ಹಾಗೂ ರೌಡಿಸಂ ಉತ್ತುಂಗದಲ್ಲಿದ್ದ ಕಾಲವದು. ಎಕ್ಕೂರ ಬಾಬ, ಯದ್ದು ಯಾನೆ ಯಗ್ಗೇಶ್ ಶೆಟ್ಟಿ, ದೇಜುಶೆಟ್ಟಿ, ಚಿಮಣಿ ಸಂತು, ಮುಕ್ಕ ರೋಹಿ, ವಾಮಂಜೂರು ರೋಹಿ, ಟೈರ್ ಕೃಷ್ಣ, ಜಯಂತ್ ರೈ, ಸುರೇಶ್ ರೈ, ರಾಕೇಶ್ ಮಲ್ಲಿ, ಮುಂತಾದವರು ಬಾಲ ಬಿಚ್ಚಲು ಶುರುಮಾಡಿದ್ದರು. ಮುತ್ತಪ್ಪ ರೈ ಬೆಂಗಳೂರು ಅಂಡರ್ ವರ್ಲ್ಡ್ ಕಬ್ಜಾ ಮಾಡಿಕೊಳ್ಳುವಲ್ಲಿ ಬ್ಯುಸಿಯಾಗಿದ್ದರೆ, ಸುರೇಶ್ ರೈ ಹಾಗೂ ರಾಕೇಶ್ ಮಲ್ಲಿ ಮಂಗಳೂರಿನ ಅಂಡರ್ ವರ್ಲ್ಡ್ ಚಟುವಟಿಕೆಗಳ ಉಸ್ತುವಾರಿ ವಹಿಸಿಕೊಂಡಿದ್ದರು.

ಬೆಂಗಳೂರಿನ ಕುಖ್ಯಾತ ರೌಡಿ ಜಯರಾಜನ ಕೊಂದ ನಂತರ ಮುತ್ತಪ್ಪ ರೈ ಹೆಸರು ಬೆಂಗಳೂರು ನಗರದಲ್ಲಿ ಮುನ್ನೆಲೆಗೆ ಬಂದಿತ್ತು. ಈ ವೇಳೆಗಾಗಲೇ ರೈ ಮೇಲೆ ಏಳೆಂಟು ಕೊಲೆ ಪ್ರಕರಣಗಳು, ಲೆಕ್ಕಕ್ಕಿರದಷ್ಟು ಜೀವ ಬೆದರಿಕೆ ಪ್ರಕರಣಗಳು ದಾಖಲಾಗಿದ್ದವು. ಅದೇ ವೇಳೆಗೆ ಮಂಗಳೂರು ರೌಡಿಗಳ ಮಟ್ಟಹಾಕುವ ನಿರ್ಧಾರಕ್ಕೆ ಬಂದ ಎಸ್.ಪಿ.ಯವರು ರೌಡಿ ನಿಗ್ರಹ ದಳ ರಚಿಸಿ ಅದರ ನೇತೃತ್ವವನ್ನು ನನ್ನ ಹೆಗಲಿಗೇರಿಸಿದರು. ಆ ದಳದಲ್ಲಿ ನನ್ನ ಜೊತೆಗೆ ಜಯಂತ್ ಶೆಟ್ಟಿ, ವಿಶ್ವನಾಥ್ ಪಂಡಿತ್, ಜಯ ಭಂಡಾರಿ, ಮನೋಹರ ಸೋನ್ಸ್, ಕೊರಗಪ್ಪ ಮುಂತಾದವರೂ ಇದ್ದರು.

ಅದೊಂದು ದಿನ ಸುರತ್ಕಲ್ ಬಳಿ ಮನೆಯೊಂದಕ್ಕೆ ಮುತ್ತಪ್ಪ ರೈ ತನ್ನ ಸಂಗಡಿಗರೊಂದಿಗೆ ಬರುತ್ತಿದ್ದಾನೆ ಎಂಬ ನಿಖರ ಮಾಹಿತಿ ನಮಗೆ ಸಿಕ್ಕಿತು. ಸಾಕಷ್ಟು ತಯಾರಿಯೊಂದಿಗೆ ನಮ್ಮ ದಳದೊಂದಿಗೆ ನಾನು ಆ ಮನೆ ಮೇಲೆ ದಾಳಿ ಮಾಡಿದೆ. ದುರಾದೃಷ್ಟವಶಾತ್ ಅಲ್ಲಿ ನಮಗೆ ರಾಕೇಶ್ ಮಲ್ಲಿಯಷ್ಟೇ ಮೂರು ವಿದೇಶಿ ಪಿಸ್ತೂಲುಗಳ ಸಮೇತ ಸಿಕ್ಕಿಬಿದ್ದ. ಆದರೂ ನಮ್ಮ ವಿಶ್ವಾಸ ಉಡುಗಲಿಲ್ಲ. ಇಲ್ಲೇ ಎಲ್ಲೊ ಹತ್ತಿರದಲ್ಲೆ ರೈ ಇರುವ ಶಂಕೆ ನಮ್ಮನ್ನು ಕಾಡುತ್ತಲೇ ಇತ್ತು. ಇಡೀ ಜಾಗವನ್ನು ತಲಾಷ್ ಮಾಡಿದೆವು. ಅಲ್ಲೇ ಹತ್ತಿರದಲ್ಲೊಂದು ಎಸ್.ಟಿ.ಡಿ. ಬೂತ್ ಇತ್ತು. ಅಲ್ಲೊಬ್ಬ ವ್ಯಕ್ತಿ ನಿಂತಿದ್ದ. ಅವನೇನಾದರು ಮತ್ತಪ್ಪ ರೈ ಪರಾರಿಯಾಗುತ್ತಿರೋದನ್ನು ನೋಡಿರುವ ಸಾಧ್ಯತೆ ಇರಬಹುದೆ ಎಂಬ ಅನುಮಾನದಲ್ಲಿ ಅವನನ್ನು ವಿಚಾರಿಸಿದೆವು. ಅದಕ್ಕಾತ, ‘ನನಗೇನು ಗೊತ್ತಿಲ್ಲಾ ಸರ್, ಆ ಥರ ಓಡಿ ಹೋಗುತ್ತಿರೋ ಯಾವ ವ್ಯಕ್ತಿಯನ್ನೂ ನಾನು ನೋಡ್ಲಿಲ್ಲ. ನಾನು ಗೋವಾದಿಂದ ಬಂದಿದ್ದೇನೆ, ಮಡಿಕೇರಿಯಲ್ಲಿ ನಡೆಯುತ್ತಿರುವ ಮದುವೆಗೆ ಹೋಗುತ್ತಿದ್ದೇನೆ. ಫೋನ್ ಮಾಡೋಣ ಅಂತ ಈಗಷ್ಟೇ ಇಲ್ಲಿಗೆ ಬಂದೆ' ಎಂದು ಹೇಳಿದ. ರೈ ಹತ್ತಿರದಲ್ಲೇ ಎಲ್ಲೋ ಎಸ್ಕೇಪ್ ಆಗುತ್ತಿರುವ ಸಾಧ್ಯತೆ ಇದ್ದುದರಿಂದ ಎಲ್ಲಾ ದಾರಿಗಳನ್ನು ಬ್ಲಾಕ್ ಮಾಡುವ ಧಾವಂತದಲ್ಲಿ ದಸ್ತಗೀರ್ ಆಗಿದ್ದ ರಾಕೇಶ್ ಮಲ್ಲಿಯೊಂದಿಗೆ ನಾವು ಅಲ್ಲಿಂದ ಹೊರಟೆವು. ಇಡೀ ದಿನ ಹುಡುಕಿದರು ರೈ ಸುಳಿವು ಸಿಗಲಿಲ್ಲ. ಆನಂತರ ವಿಚಾರಣೆ ಸಮಯದಲ್ಲಿ ಮಲ್ಲಿ ಹೇಳಿದ್ದನ್ನು ಕೇಳಿ ನಾವೆಲ್ಲ ಹೌಹಾರಿ ಹೋದೆವು. ಯಾಕೆಂದರೆ, ಅವತ್ತು ನಾವು ಎಸ್.ಟಿ.ಡಿ. ಬೂತಿನಲ್ಲಿ ಮಾತಾಡಿಸಿದ ವ್ಯಕ್ತಿಯೇ ಮುತ್ತಪ್ಪ ರೈ ಆಗಿದ್ದ!. ನಾನು ಅವನನ್ನು ಅದುವರೆಗೆ ಎಂದೂ ಖುದ್ದಾಗಿ ನೋಡಿರಲಿಲ್ಲ, ನಮ್ಮ ದಳದ ಇತರರು ಸಹಾ ಅವನನ್ನು ನೋಡಿರಲಿಲ್ಲ. ಹಾಗಾಗಿ ಕಣ್ಮುಂದೆಯೇ ಇದ್ದ ಮುತ್ತಪ್ಪ ರೈ ಗುರುತಿಸುವಲ್ಲಿ ನಾವೆಲ್ಲ ಯಾಮಾರಿದ್ದೆವು. ಅದೊಂದು ಕೊರಗು ನನ್ನನ್ನು ಇವತ್ತೂ ಕಾಡುತ್ತಿದೆ.

ಆ ಘಟನೆಯಾದ ಮೇಲೆ ರೈ ನನ್ನ ಮೇಲೆ ದುಷ್ಮನಿ ಸಾಧಿಸಲು ಶುರು ಮಾಡಿದ. ಆದರೆ ಅವನ ಪರಿಸ್ಥಿತಿ ಮೊದಲಿನಷ್ಟು ಸರಾಗವಾಗಿರಲಿಲ್ಲ. ಫೀಲ್ಡ್ ಒಳಗೆ ದುಷ್ಮನ್​ಗಳು ಬೆಳೆದುಕೊಂಡಿದ್ದರು. ರೈ ಹೆಸರು ಮೋಸ್ಟ್ ವಾಂಟೆಡ್ ಕ್ರಿಮಿನಲ್ ಪಟ್ಟಿಯಲ್ಲಿ ಇತ್ತು. ಬೆಂಗಳೂರು ಪೊಲೀಸರಷ್ಟೇ ಅಲ್ಲ, ಮುಂಬೈ ಪೊಲೀಸರು ಆತನ ತಲಾಷಿನಲ್ಲಿದ್ದರು. ಒಂದು ಕಡೆ ದುಷ್ಮನಿಗಳ ಹಲ್ಲೆಯ, ಭೀತಿ ಮತ್ತೊಂದು ಕಡೆ ಪೊಲೀಸರ ಹುಡುಕಾಟ. ಬಹುಶಃ ಮುತ್ತಪ್ಪನಿಗೆ ಪ್ರಾಣಭಯ ಉತ್ಕಟ ತಲುಪಿದ್ದೇ ಆಗ ಅನ್ನಿಸುತ್ತೆ. ಅದಕ್ಕಾಗಿ ರೈ ದಾವೂದ್ ಇಬ್ರಾಹಿಂ ಬಲಗೈ ಬಂಟ ಉಡುಪಿಯ ಶರತ್ ಶೆಟ್ಟಿಯ ಸಹಾಯ ಪಡೆದು ದುಬೈಗೆ ಹಾರಿ ಹೋದ.

ಅಷ್ಟಾದರೂ ಅವನಿಗೆ ನನ್ನ ಮೇಲಿನ ಸಿಟ್ಟು ತಣಿದಿರಲಿಲ್ಲ ಅನಿಸುತ್ತೆ. ಅದೊಂದು ದಿನ ನೇರವಾಗಿ ದುಬೈನಿಂದ ನನ್ನ ಪಣಂಬೂರು ಕ್ವಾಟ್ರಸ್ ನಂಬರಿಗೆ ಫೋನ್ ಮಾಡಿ ‘ನಮ್ಮ ದಂಧೆಗಳಿಗೆ ಅಡ್ಡಿಯಾಗುತ್ತಿರುವ ನಿನಗೆ ಪಾಠ ಕಲಿಸಲು ನಿನ್ನ ಮಗಳನ್ನೇ ಕಿಡ್ನಾಪ್ ಮಾಡ್ತೀನಿ' ಅಂತ ಬೆದರಿಕೆ ಹಾಕಿದ್ದ. ಆದರೆ ನಾನದಕ್ಕೆ ಕೇರ್ ಮಾಡಿರಲಿಲ್ಲ. ಆದರೆ ಎಂಟು ವರ್ಷಗಳ ತರುವಾಯ ಅದೇ ಮುತ್ತಪ್ಪ ನನ್ನೆದುರು ನಮಸ್ಕಾರ ಹೊಡೆಯುತ್ತಾ ನಿಂತಿದ್ದ.

ಅಂದಹಾಗೆ, 1995 ರಲ್ಲಿ ಮುತ್ತಪ್ಪ ರೈ ನಮ್ಮ ಕೈಯಿಂದ ಜಸ್ಟ್ ಮಿಸ್ ಆದ, ತರುವಾಯ ಅವತ್ತು ನಮಗೆ ಶಸ್ತ್ರಾಸ್ತ್ರ ಸಮೇತ ಸಿಕ್ಕಿಬಿದ್ದಿದ್ದ ರಾಕೇಶ್ ಮಲ್ಲಿಯನ್ನೇ ಆಧಾರವಾಗಿಟ್ಟುಕೊಂಡು ಮುತ್ತಪ್ಪ ರೈ ಮತ್ತವನ ಸಂಗಡಿಗರ ಮೇಲೆ ಟಾಡಾ ಕಾಯ್ದೆಯಡಿ ಕೇಸು ದಾಖಲಿಸಲು ನಾವು ಎಲ್ಲಾ ತಯಾರಿ ಮಾಡಿಕೊಂಡೆವು. ನೆನಪಿರಲಿ, ಈ ಕಾಯ್ದೆ ಜಾರಿಗೆ ಬಂದ ನಂತರ ಕರ್ನಾಟಕದ ರಾಯಚೂರಿನಲ್ಲಿ ಮೊದಲ ಪ್ರಕರಣ ದಾಖಲಾದ ನಂತರ ಎರಡನೇ ಪ್ರಕರಣ ಮತ್ತೆಲ್ಲೂ ದಾಖಲಾಗಿರಲಿಲ್ಲ. ಮುತ್ತಪ್ಪ ರೈ ಮೇಲೆ ಆ ಕಾಯ್ದೆಯಡಿ ಕೇಸು ದಾಖಲಿಸುವ ಸಾಹಸಕ್ಕೆ ನಾವು ಮುಂದಾಗಿದ್ದೆವು.

ಟಾಡಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಬೇಕಾದರೆ ದೂರುದಾರ ಡಿಎಸ್​ಪಿ ಹಾಗೂ ಮೇಲ್ಪಟ್ಟ ಅಧಿಕಾರಿಯಾಗಿರಬೇಕು. ಹಾಗೂ ದೂರುದಾರನ ವರದಿಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಬೇಕಾದರೆ ಎಸ್ ಪಿ ಯವರ ಪೂರ್ವಾನುಮತಿ ಪತ್ರ ಕಡ್ಡಾಯವಾಗಿತ್ತು. ಇಷ್ಟೆಲ್ಲ ತಯಾರಿ ಮಾಡಿಕೊಂಡು ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರಕ ಸಾಕ್ಷಾಧಾರಗಳನ್ನು ಸಂಗ್ರಹ ಮಾಡಿ ಚಾರ್ಜ್ ಶೀಟನ್ನೂ ತಯಾರಿಸಲಾಗಿತ್ತು. ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿಯವರು ಅನುಮೋದನೆಯನ್ನೂ ನೀಡಿದ್ದರು. ಆದರೆ ಆರೋಪಪಟ್ಟಿಯಲ್ಲಿ ಮುತ್ತಪ್ಪ ರೈ ಹೆಸರು ಸೇರಿಸಲು ಸಾಕ್ಷ್ಯಗಳ ಕೊರತೆಯಿದೆ ಎಂದು ಆತನ ಹೆಸರಿಗೆ ಅನುಮತಿಯೇ ಸಿಗಲಿಲ್ಲ. ಅವತ್ತು ಕಾಣದ ಕೈಯೊಂದು ಮುತ್ತಪ್ಪನ ಹಿತ ಕಾಯ್ದಿತ್ತು.

ನಾನು ಮುತ್ತಪ್ಪ ರೈನನ್ನು ಕಡೆಯ ಬಾರಿಗೆ ಮುಖಾಮುಖಿಯಾದದ್ದು 2013 ರಲ್ಲಿ. ಅಷ್ಟರಲ್ಲಾಗಲೇ ಜಯ ಕರ್ನಾಟಕ ಸಂಘಟನೆ ಕಟ್ಟಿಕೊಂಡು ಹೋರಾಟಗಾರನಾಗಲು ಹೆಣಗಾಟ ಶುರು ಮಾಡಿಕೊಂಡಿದ್ದ ಮುತ್ತಪ್ಪ, ಪಶ್ಚಿಮ ವಿಭಾಗದ ಡಿಸಿಪಿಯಾಗಿದ್ದ ನನ್ನ ಕಚೇರಿಗೆ ಬಂದು ತನ್ನ ಸಂಘಟನೆ ಆಯೋಜಿಸಿದ್ದ ಒಂದು ಮೆರವಣಿಗೆಯ ಮೇಲೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಸುರಿಸಲು ಅನುಮತಿ ನೀಡುವಂತೆ ಮನವಿ ಮಾಡಿಕೊಂಡಿದ್ದ.

ವಿಜಯಾ ಬ್ಯಾಂಕ್ ಕ್ಲರ್ಕ್ ನೌಕರಿಯಲ್ಲಿದ್ದ ಮುತ್ತಪ್ಪ, ಬೆಂಗಳೂರು ಪಾತಕ ಜಗತ್ತಿನ ನಟೋರಿಯಸ್ ಕ್ರಿಮಿನಲ್ ಜಯರಾಜ್​ನ ಎದೆಗೆ ಗುಂಡು ನುಗ್ಗಿಸಿ ರಾತ್ರೋರಾತ್ರಿ ಭೂಗತ ಲೋಕದ ಕತ್ತಲು ಸೇರಿದ. ಆನಂತರ ಅವನು ಬೆಳಕು ಕಾಣಲು ಯತ್ನಿಸಿದಷ್ಟೂ ಕತ್ತಲೆಯ ಬಿಗಿಹಿಡಿತದ ಬಂಧಿಯಾಗುತ್ತಲೇ ಹೋದ. ಇಲ್ಲಿ ಮುತ್ತಪ್ಪನಿಗೆ ಅನುಕಂಪದ ಅಗತ್ಯವಿಲ್ಲ, ಯಾಕೆಂದರೆ ಅದು ಅವನೇ ಆಯ್ದುಕೊಂಡ ಹಾದಿ. ಸಮಾಜ ಸೇವೆಯ ಸೋಗಿನಲ್ಲಿ ತನ್ನ ಬದುಕಿನೊಳಗೆ ಬಲವಂತದ ಬೆಳಕು ನುಗ್ಗಿಸಿಕೊಳ್ಳಲು ಆತ ಯತ್ನಿಸಿದರೂ, ಕ್ಯಾನ್ಸರ್ ರೂಪದಲ್ಲಿ ಶಿಕ್ಷೆ ಆತನ ಜೀವನಕ್ಕೆ ಪೂರ್ಣವಿರಾಮ ಇಟ್ಟಿದೆ. ಹಣಕ್ಕೆ ದಾದಾಗಿರಿ ಮಾಡಿಸುವ ಶಕ್ತಿ ಇರಬಹುದು, ಪಾತಕ ದೊರೆಯಾಗಿಸುವ ಶಕ್ತಿ ಇರಬಹುದು, ಸಂಘಟನೆ ಕಟ್ಟಿಸುವ-ಕಾರ್ಯಕರ್ತರನ್ನು ಕೂಡಿಡುವ ಶಕ್ತಿಯೂ ಹಣಕ್ಕೆ ಇರಬಹುದು. ಏಳು ಸುತ್ತಿನ ಕೋಟೆಯಂತಹ ಬಂಗಲೆ ಕಟ್ಟಿಸುವ ತಾಕತ್ತೂ ಅದಕ್ಕಿರಬಹುದು. ಆದರೆ ಸಾವನ್ನು ತಡೆಯುವ ಶಕ್ತಿ ಆ ಹಣಕ್ಕಿಲ್ಲ. ಹುಟ್ಟು ಮತ್ತು ಸಾವು ಎಂಬೆರಡು ವಾಸ್ತವಗಳ ನಡುವಿನ ಈ ಸತ್ಯವನ್ನು ನಾವೆಲ್ಲ ಅರ್ಥ ಮಾಡಿಕೊಂಡಿದ್ದೇ ಆದಲ್ಲಿ ಮುಂದೆ ನಮ್ಮ ನಡುವೆ ಮತ್ತೊಬ್ಬ ಮುತ್ತಪ್ಪ ರೈ ತಲೆ ಎತ್ತಲಾರ. ಮುಖ್ಯವಾಗಿ ಫ್ಯಾಂಟಸಿ ಮತ್ತು ಉನ್ಮಾದದ ಬೆನ್ನು ಬಿದ್ದ ಯುವ ಪೀಳಿಗೆ ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ'.

ಡಾ. ಡಿ.ಸಿ. ರಾಜಪ್ಪ, ಐ.ಪಿ.ಎಸ್,

ಡಿ.ಐ.ಜಿ.ಪಿ ನಿವೃತ್ತ-

(ಮೇಲಿನ ಲೇಖನದಲ್ಲಿ ಪ್ರಕಟವಾಗಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ)

Last Updated : May 23, 2020, 5:46 PM IST

ABOUT THE AUTHOR

...view details