ಪ್ರಯಾಗರಾಜ್(ಉ.ಪ್ರದೇಶ): ವಿವಾಹ ಎಂಬುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತಂತೆ. ಬಾಳ ಸಂಗಾತಿಯಾಗಿ ಆ ದೇವರೇ ನಮಗೆ ಸಂಗಾತಿ ನೀಡಿರುತ್ತಾನಂತೆ. ಇಂತಹ ಬಂಧ ಯಾವುದೇ ಅಡೆತಡೆಗಳು ಬಂದರೂ ಶಾಶ್ವತವಾಗಿ ನಿಲ್ಲುತ್ತವೆ ಎಂಬುದಕ್ಕೆ ಈ ವಿವಾಹವೇ ಸಾಕ್ಷಿ..
ಇದು ಪ್ರಯಾಗರಾಜ್ನ ಪ್ರತಾಪಗಡ್ ಜಿಲ್ಲೆಯಲ್ಲಿ ನಡೆದ ಘಟನೆ. ಕುಂದಾ ಪ್ರದೇಶದ ನಿವಾಸಿ ಆರತಿ ಮೌರ್ಯ ಹಾಗೂ ಹತ್ತಿರದ ಗ್ರಾಮದ ಅವಧೇಶ್ ಎಂಬವರಿಗೆ ವಿವಾಹ ನಿಶ್ಚಯವಾಗಿತ್ತು. ಮದುವೆ ಸಂಭ್ರಮ ಎರಡೂ ಮನೆಯಲ್ಲಿ ತುಂಬಿ ತುಳುಕಾಡುತ್ತಿತ್ತು. ಎಲ್ಲವೂ ಸರಿಯಾಗಿ ನಡೆಯುತ್ತಿತ್ತು ಎನ್ನುವಾಗಲೇ ಅಲ್ಲೊಂದು ದುರಂತ ನಡೆದು ಹೋಗಿತ್ತು.
ಮದುವೆಯ ದಿನ ಸಂಭ್ರಮದಿಂದ ಮೆರವಣಿಗೆಯ ಸಿದ್ಧತೆಗಳು ಪ್ರಾರಂಭವಾಗಿದ್ದವು. ಕುಟುಂಬ ಸದಸ್ಯರು, ಅತಿಥಿಗಳು ಮದುವೆ ತಯಾರಿ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಮಹಡಿ ಮೇಲಿಂದ ಬೀಳುತ್ತಿದ್ದ ಮಗುವೊಂದನ್ನು ರಕ್ಷಿಸಲು ಹೋದ ವಧು ಆರತಿಯ ಕಾಲು ಜಾರಿ ಮೇಲ್ಛಾವಣಿಯಿಂದ ಕೆಳಗೆ ಬಿದ್ದಿದ್ದಾಳೆ. ಮೇಲಿನಿಂದ ಬಿದ್ದ ಆರತಿಯ ಬೆನ್ನೆಲುಬು ಸಂಪೂರ್ಣವಾಗಿ ಮುರಿದಿದೆ. ಸೊಂಟ ಮತ್ತು ಕಾಲುಗಳು ಸೇರಿದಂತೆ ದೇಹದ ಇತರ ಭಾಗಗಳೂ ಗಾಯಗೊಂಡಿವೆ.
ತಕ್ಷಣವೇ ವಧುವನ್ನು ನೆರೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಈ ಸಮಯದಲ್ಲಿ ಆರತಿ ತೀರಾ ದುರ್ಬಲಗೊಂಡಿದ್ದು, ಆಕೆಗೆ ಇನ್ನು ಹಲವಾರು ತಿಂಗಳು ಹಾಸಿಗೆಯಿಂದ ಎದ್ದೇಳಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಬಳಿಕ ವರ ಅವಧೇಶ್ ಕುಟುಂಬಕ್ಕೆ ನಡೆದ ವಿಷಯವನ್ನು ತಿಳಿಸಲಾಯಿತು. ಯಾವುದೇ ಕಾರಣಕ್ಕೂ ಈ ವಿವಾಹ ಸಂಬಂಧವನ್ನು ಮುರಿದುಕೊಳ್ಳಲು ಇಷ್ಟಪಡದ ವಧುವಿನ ಮನೆಯವರು, ಆರತಿ ತಂಗಿಯನ್ನು ವಿವಾಹವಾಗುವಂತೆ ವರನ ಮನೆಯವರನ್ನು ಬೇಡಿಕೊಂಡಿದ್ದಾರೆ.