ಬೆಂಗಳೂರು: ಮಧ್ಯಪ್ರದೇಶ ರಾಜಕೀಯ ಹೈಡ್ರಾಮಾ ಮುಂದುವರಿದಿದ್ದು, ಕಾಂಗ್ರೆಸ್ನ 17 ಶಾಸಕರು ನಾಪತ್ತೆಯಾಗಿದ್ದು, 10 ಶಾಸಕರು ಬೆಂಗಳೂರಿನಲ್ಲಿ ಪ್ರತ್ಯಕ್ಷಗೊಂಡಿದ್ದಾರೆ. ಇದರಿಂದ ಕಮಲ್ನಾಥ್ ನೇತೃತ್ವದ ಕಾಂಗ್ರೆಸ್ನಲ್ಲಿ ಆತಂಕ ಶುರುವಾಗಿದೆ.
ಬೆಂಗಳೂರಿಗೆ ಆಗಮಿಸಿರುವ ಕಾಂಗ್ರೆಸ್ ಶಾಸಕರು ಜ್ಯೋತಿರಾದಿತ್ಯ ಸಿಂಧಿಯಾ ಅವರ ಬೆಂಬಲಿತ ಶಾಸಕರಾಗಿರುವ ಇವರ ಬೆಂಗಳೂರಿನ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದು, ಅವರ ಮೊಬೈಲ್ ಸ್ವಿಚ್ ಆಫ್ ಆಗಿವೆ ಎಂದು ತಿಳಿದು ಬಂದಿದೆ. 17 ಶಾಸಕರ ಪೈಕಿ ಆರು ಮಂದಿ ಸಚಿವರು ಸೇರಿಕೊಂಡಿದ್ದು, ಬೆಂಗಳೂರಿನ ವೈಟ್ಫೀಲ್ಡ್ ರೆಸಾರ್ಟ್ನಲ್ಲಿ ಉಳಿದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿ ಕಮಲ್ನಾಥ್ ಪ್ರತಿಕ್ರಿಯೆ ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲಕ್ಕೆ ಯತ್ನಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಕಳೆದ ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ನಾಲ್ವರು ಶಾಸಕರು ಕಾಣೆಯಾಗಿದ್ದರು. ಅದರಲ್ಲಿ ಓರ್ವ ಶಾಸಕ ಸುರೇಂದ್ರ ಸಿಂಗ್ ಶೆರಾ ಶನಿವಾರ ಮಧ್ಯಾಹ್ನ ಪ್ರತ್ಯಕ್ಷರಾಗಿದ್ದರು. ಇತರೆ ಮೂವರು ಶಾಸಕರಾದ ಹರ್ದೀಪ್ ಸಿಂಗ್ ದಂಗ್, ರಘುರಾಜ್ ಕನ್ಸಾನಾ ಮತ್ತು ಬಿಸಾವುಲಾಲ್ ಸಿಂಗ್ ಅವರು ರಾಜ್ಯದಿಂದ ಕಾಣೆಯಾಗಿದ್ದಾರೆ. ಶಾಸಕರನ್ನು ಬಿಜೆಪಿ ನಾಯಕರು ಅಪಹರಿಸಿ ಕರ್ನಾಟಕದಲ್ಲಿ ಇರಿಸಿದ್ದಾರೆ ಎಂದು ಆಡಳಿತಾರೂಢ ಕಾಂಗ್ರೆಸ್ ಆರೋಪಿಸಿತ್ತು.
ಬೆಂಗಳೂರಿಗೆ ಆಗಮಿಸಿರುವ ಕಾಂಗ್ರೆಸ್ ಶಾಸಕರು
- ರಾಜವರ್ಧನ್ ಸಿಂಗ್
- ಪ್ರದುಮಾನ್ ಸಿಂಗ್ ತೋಮರ್
- ಬಂಕಿಮ್ ಸಿಲಾವತ್
- ಗಿರಿರಾಜ್
- ರಕ್ಷಾ
- ಜಸ್ವಂತ್ ಜಾಥಾವ್
- ಸುರೇಶ್ ದಾಕಾಡ್
- ಜಾಜ್ಪಾಲ್ ಸಿಂಗ್
- ಬ್ರಿಜೇಂದ್ರ ಯಾದವ್
- ಪುರುಷೋತ್ತಮ ಪ್ರಶರ್
ಇದರ ಬೆನ್ನಲ್ಲೇ ಇದೀಗ ಕಾಂಗ್ರೆಸ್ನ 25 ಶಾಸಕರು ಕಾಣೆಯಾಗಿರುವುದು ಆಡಳಿತ ರೂಢ ಕಾಂಗ್ರೆಸ್ ಪಕ್ಷದಲ್ಲಿ ಮತ್ತಷ್ಟು ಆತಂಕಕ್ಕೊಳಗಾಗುವಂತೆ ಮಾಡಿದ್ದು, ಮುಖ್ಯಮಂತ್ರಿ ಕಮಲ್ನಾಥ್ ನೇತೃತ್ವದ ಸರ್ಕಾರ ಇದೀಗ ಸಂಕಷ್ಟಕ್ಕೊಳಗಾಗಿದೆ. ಇದೀಗ ಮುಖ್ಯಮಂತ್ರಿ ಕಮಲ್ನಾಥ್ ಕಾಂಗ್ರೆಸ್ನ ಹಿರಿಯ ಮುಖಂಡರ ಭೇಟಿ ಮಾಡಲು ಮುಂದಾಗಿದ್ದು, ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ.
ಇಂದು ಸಂಜೆ ನಗರದ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರಾದ ರಾಜವರ್ಧನ್ ಸಿಂಗ್, ಪ್ರದುಮಾನ್ ಸಿಂಗ್ ತೋಮರ್, ಬಂಕಿಮ್ ಸಿಲಾವತ್, ಗಿರಿರಾಜ್, ರಕ್ಷಾ, ಜಸ್ವಂತ್ ಜಾಥಾವ್, ಸುರೇಶ್ ದಾಕಾಡ್, ಜಾಜ್ಪಾಲ್ ಸಿಂಗ್, ಬ್ರಿಜೇಂದ್ರ ಯಾದವ್, ಪುರುಷೋತ್ತಮ ಪ್ರಶರ್ ಆಗಮಿಸಿರುವ ಮಾಹಿತಿ ದೊರಕಿದೆ. ನಾಳೆಯೊಳಗೆ ಮತ್ತಷ್ಟು ಶಾಸಕರು ಬೆಂಗಳೂರಿಗೆ ಆಗಮಿಸುತ್ತಾರೆ ಎಂದು ಮೂಲಗಳು ತಿಳಿಸಿವೆ