ಬಿಹಾರ್: ಕಳೆದ ವರ್ಷ ಬಿಹಾರ್ನಲ್ಲಿ 200 ಮಕ್ಕಳನ್ನು ಬಲಿ ಪಡೆದಿದ್ದ ಮೆದುಳು ಜ್ವರ ಎಂದು ಕರೆಯುವ ಅಕ್ಯುಟ್ ಎನ್ಸೆಫಾಲಿಟಿಸ್ ಸಿಂಡ್ರೋಮ್ (ಎಇಎಸ್) ಇದೀಗ ಮತ್ತೆ ರಾಜ್ಯದಲ್ಲಿ ಅಪ್ಪಳಿಸಿದ್ದು, ಎರಡು ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೆದುಳು ರೋಗಕ್ಕೆ ಕಳೆದ ವರ್ಷ 120ಕ್ಕೂ ಹೆಚ್ಚು ಸಾವುಗಳಿಗೆ ಸಾಕ್ಷಿಯಾಗಿದ್ದ ಶ್ರೀ ಕೃಷ್ಣ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇದೀಗ ಈ ವರ್ಷದ ಮೊದಲ ಎಇಎಸ್ ರೋಗಿ ದಾಖಲಾಗಿರುವುದಾಗಿ ಆಸ್ಪತ್ರೆಯ ಅಧೀಕ್ಷಕ ಎಸ್ ಕೆ ಶಾಹಿ ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಶೀತದಿಂದ ಬಳಲುತ್ತಿದ್ದ ಮುಜಾಫರ್ಪುರ ಜಿಲ್ಲೆಯ ಬಾಜಿ ಬುಜುರ್ಗ್ ಗ್ರಾಮದ ಮೂರು ವರ್ಷದ ಬಾಲಕನನ್ನು ಪೋಷಕರು ಆಸ್ಪತ್ರೆಗೆ ಕರೆತಂದಿದ್ದರು. ಮೆದುಳು ರೋಗ ದೃಢಪಟ್ಟಿದ್ದು, ಇದೀಗ ಆ ಮಗುವಿನ ಪರಿಸ್ಥಿತಿ ಗಂಭೀರವಾಗಿದೆ ಎಂದು ಶಾಹಿ ಹೇಳಿದ್ದಾರೆ. ಇದಲ್ಲದೇ, ಪೂರ್ವ ಚಂಪಾರಣ್ ಜಿಲ್ಲೆಯ ಬಾಲಕಿಯೊಬ್ಬಳಿಗೆ ಮೆದುಳು ಜ್ವರವಿರುವುದು ವರದಿಯಾಗಿದ್ದು, ಮೋತಿಹರಿಯಲ್ಲಿನ ಸದರ್ ಆಸ್ಪತ್ರೆಯಿಂದ SKMCH ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿದೆ.
ಎಇಎಸ್ ಪೀಡಿತ ಮಕ್ಕಳಲ್ಲಿ ಗ್ಲೂಕೋಸ್ ಮಟ್ಟದಲ್ಲಿ ಹಠಾತ್ ಕುಸಿತವಾಗಿ ಅದು ಹೈಪೊಗ್ಲಿಸಿಮಿಯಾಗೆ ಕಾರಣವಾಗುತ್ತದೆ. ಹೀಗಾಗಿ ಮಕ್ಕಳು ಬದುಕುಳಿಯುವ ಸಾಧ್ಯತೆ ಕಡಿಮೆ ಇರುತ್ತದೆ.
ಇನ್ನು ಕೊರೊನಾ ಬಿಕ್ಕಟ್ಟಿನ ನಡುವೆಯೂ ಬಿಹಾರ್ ಸಿಎಂ ನಿತೀಶ್ ಕುಮಾರ್, ಎಇಎಸ್ ಚಿಕಿತ್ಸೆಗೆ ಹೆಚ್ಚು ಒತ್ತು ನೀಡುವಂತೆ ಪಾಟ್ನಾದಲ್ಲಿ ದೊಡ್ಡ ಮಟ್ಟದಲ್ಲಿ ಸಭೆ ನಡೆಸಿದ್ದಾರೆ.