ನವದೆಹಲಿ: ರಾಷ್ಟ್ರಪತಿ ಭಾಷಣವನ್ನು ಬಹಿಷ್ಕರಿಸುವುದು ಎಂದರೆ ಅವರನ್ನು ಅವಮಾನಿಸಿದಂತಲ್ಲ. ನಾವು ರೈತರ ಪರವಾಗಿದ್ದು, ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದೇವೆ. ಸದನದಲ್ಲಿ ಈ ಕುರಿತು ಚರ್ಚಿಸುತ್ತೇವೆ ಎಂದು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ತಿಳಿಸಿದ್ದಾರೆ.
ರಾಷ್ಟ್ರಪತಿಗಳ ಭಾಷಣ ಬಹಿಷ್ಕರಿಸುವುದರ ಮೂಲಕ ರೈತರಿಗೆ ಬೆಂಬಲಿಸಿದ್ದೇವೆ. ರೈತರನ್ನು ದೇಶದ್ರೋಹಿಗಳೆಂದು ಕರೆದಿದ್ದರಿಂದ ನಾವು ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಆಪ್ ಪಕ್ಷದ ಸಂಸದ ಸಂಜಯ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಸರ್ಕಾರ ನೂತನ ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕು ಹಾಗಾಗಿ ನಾವು ಪ್ರತಿಭಟನೆ ನಡೆಸಿದೆವು ಎಂದರು.
ಆರ್ಎಲ್ಪಿ ಸಂಸದ ಹನುಮಾನ್ ಬೆನಿವಾಲ್, ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಸಂಸತ್ನಲ್ಲಿ ಫಲಕ ಪ್ರದರ್ಶಿಸಿದರು.
ಇಂದಿನ ಬಜೆಟ್ ಅಧಿವೇಶನವು ರಾಷ್ಟ್ರಪತಿ ಭಾಷಣದೊಂದಿಗೆ ಪ್ರಾರಂಭವಾಯಿತು. ಆದರೆ, ಎಲ್ಲ ಪ್ರತಿಪಕ್ಷಗಳು ಭಾಷಣ ಬಹಿಷ್ಕರಿಸಿದ್ದು, ನಿಜಕ್ಕೂ ದುರದೃಷ್ಟಕರ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಬೇಸರ ವ್ಯಕ್ತಪಡಿಸಿದ್ದಾರೆ. ರಾಜಕೀಯ ಭಿನ್ನಾಭಿಪ್ರಾಯಗಳಿಗಿಂತ ರಾಷ್ಟ್ರಪತಿ ಹುದ್ದೆ ಮೇಲಿದೆ. ಅವರು ಸಾಂವಿಧಾನಿಕ ಮುಖ್ಯಸ್ಥರು. ಅಧ್ಯಕ್ಷರ ಭಾಷಣ ಗೌರವಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಆರೋಗ್ಯಕರ ಅಭ್ಯಾಸ. ಆದರೆ, 50 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಅಧ್ಯಕ್ಷರ ಭಾಷಣ ಬಹಿಷ್ಕರಿಸಿರೋದು ದುರದೃಷ್ಟಕರ ಎಂದು ವಿಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ.