ಮುಂಬೈ: ಭೀಮಾ ಕೋರೆಗಾಂವ್ ಪ್ರಕರಣದ ಬಂಧಿತ ಆರೋಪಿಯ ಜಾಮೀನು ಅರ್ಜಿ ವಿಚಾರಣೆ ವೇಳೆ ಬಾಂಬೆ ಹೈಕೋರ್ಟ್ ಜಡ್ಜ್ , ಲಿಯೋ ಟಾಲ್ಸ್ಟಾಯ್ ಅವರ 'ಯುದ್ಧ ಮತ್ತು ಶಾಂತಿ' ಪುಸ್ತಕ ನಿಮ್ಮ ಬಳಿ ಇರುವುದೇಕೆ? ಎಂದು ಪ್ರಶ್ನಿಸಿ, ಅರ್ಜಿಯನ್ನು ವಜಾಗೊಳಿಸಿದ್ದರು. ಇದೀಗ ನ್ಯಾಯಾಧೀಶರ ನಡೆಗೆ ನೆಟ್ಟಿಗರು ಗರಂ ಆಗಿ, ತಮ್ಮ ಬಳಿಯೂ ಈ ಪುಸ್ತಕ ಇದೆ ಎಂದು ಬರೆದುಕೊಳ್ಳುತ್ತಿದ್ದಾರೆ.
2018 ರಲ್ಲಿ ನಡೆದ ಭೀಮಾ ಕೋರೆಗಾಂವ್ ಸಂಘರ್ಷಕ್ಕೆ ಸಂಬಂಧಿಸಿದ ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಬಂಧಿತ ಆರೋಪಿಯಾಗಿರುವ ವೆರ್ನಾನ್ ಗೊನ್ಸಾಲ್ವೆಸ್ ಅವರ ಮನೆಯಲ್ಲಿ ಕಬೀರ್ ಕಾಲಾ ಮಂಚ್ ಅವರ 'ರಾಜ್ಯ ದಮನ್ ವಿರೋಧಿ' ಎಂಬ ಸಿ ಡಿ ಹಾಗೂ ಲಿಯೋ ಟಾಲ್ಸ್ಟಾಯ್ ಅವರ 'ಯುದ್ಧ ಮತ್ತು ಶಾಂತಿ' (War and Peace) ಸೇರಿದಂತೆ ಕೆಲ ಪುಸ್ತಕಗಳು ಸಿಕ್ಕಿದ್ದವು.
ವೆರ್ನಾನ್ ಗೊನ್ಸಾಲ್ವೆಸ್ರ ಜಾಮೀನು ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ್ದ ಮುಂಬೈ ಹೈಕೋರ್ಟ್, ಬೇರೆ ದೇಶದ ಯುದ್ಧದ ಬಗ್ಗೆ ಲಿಯೋ ಟಾಲ್ಸ್ಟಾಯ್ ಬರೆದಿರುವ 'ಯುದ್ಧ ಮತ್ತು ಶಾಂತಿ' ಎಂಬ ಪುಸ್ತಕವನ್ನು ನಿಮ್ಮ ಮನೆಯಲ್ಲಿ ಏಕೆ ಇಟ್ಟುಕೊಂಡಿದ್ದೀರಿ? ಎಂದು ಪ್ರಶ್ನಿಸಿ ಜಾಮೀನು ಅರ್ಜಿಯನ್ನು ವಜಾ ಮಾಡಿತ್ತು. ಅಲ್ಲದೆ ಈ ಕುರಿತು ಗುರುವಾರ ವಿವರಣೆ ನೀಡುವಂತೆಯೂ ತಾಕೀತು ಮಾಡಿತ್ತು.
ಈ ಕುರಿತು ಕೋರ್ಟ್ಗೆ ಮಾಹಿತಿ ನೀಡಿರುವ ವೆರ್ನಾನ್ ಗೊನ್ಸಾಲ್ವೆಸ್ ಪರ ವಕೀಲರು, ಗೊನ್ಸಾಲ್ವೆಸ್ ಮನೆಯಲ್ಲಿ ಪೊಲೀಸರಿಗೆ ಸಿಕ್ಕಿರುವುದು ಲಿಯೋ ಟಾಲ್ಸ್ಟಾಯ್ ಅವರ 'ಯುದ್ಧ ಮತ್ತು ಶಾಂತಿ' ಪುಸ್ತಕ ಅಲ್ಲ, ಬದಲಾಗಿ ಕೋಲ್ಕತ್ತಾ ಮೂಲದ ಪತ್ರಕರ್ತ ಬಿಸ್ವಜಿತ್ ರಾಯ್ ಬರೆದಿರುವ 'ಜಂಗಲ್ ಮಹಲ್ನಲ್ಲಿ ಯುದ್ಧ ಮತ್ತು ಶಾಂತಿ' (War and Peace in Junglemahal) ಎಂಬ ಪುಸ್ತಕ ಎಂದು ತಿಳಿಸಿದ್ದಾರೆ.