ಕರ್ನಾಟಕ

karnataka

ETV Bharat / bharat

ಅಸ್ಸೋಂನಲ್ಲಿ ಬೋಡೋ ಸಮುದಾಯಕ್ಕೆ ಇನ್ನು ಮುಂದಾದರೂ ಸಿಗುತ್ತಾ ಶಾಂತಿ ಸಮೃದ್ಧತೆ? - ಭಾರತದ ಬುಡಕಟ್ಟು ಸಮುದಾಯ

ನವದೆಹಲಿಯಲ್ಲಿ ಗೃಹ ಸಚಿವ ಅಮಿತ್‌‌ ಶಾ ಸಮ್ಮುಖದಲ್ಲಿ ಎನ್‌ಡಿಎಫ್‌ಬಿ ಜೊತೆಗೆ ಅಖಿಲ ಭಾರತ ಬೊಡೊ ವಿದ್ಯಾರ್ಥಿಗಳ ಒಕ್ಕೂಟ ಮತ್ತು ಬೊಡೊ ಜನರ ಸಂಯುಕ್ತ ಸಂಘಟನೆಗಳು ಕೂಡಾ ಶಾಂತಿ ಒಪ್ಪಂದಕ್ಕೆ ಸಹಿ ಮಾಡಿವೆ.

Bodo militants peace deal with central and state governments
Bodo militants peace deal with central and state governments

By

Published : Feb 4, 2020, 6:39 PM IST

ತಮ್ಮ ಸಾರ್ವಭೌಮತ್ವಕ್ಕಾಗಿ ಹೋರಾಡುತ್ತಿರುವ 15 ಲಕ್ಷ ಬೊಡೊಗಳ ಪಾಲಿಗೆ ಬ್ರಹ್ಮಪುತ್ರಾ ನದಿಯ ಉತ್ತರ ದಂಡೆ ಯುದ್ಧ ಭೂಮಿಯಾಗಿಬಿಟ್ಟಿದೆ. ನುಸುಳುಕೋರ ಗುಂಪುಗಳು ಮತ್ತು ಸರ್ಕಾರದ ನಡುವೆ ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿರುವ ಹೋರಾಟದಲ್ಲಿ ಹಲವಾರು ನಾಗರಿಕರು ಈಗಾಗಲೇ ಜೀವ ಕಳೆದುಕೊಂಡಾಗಿದೆ. ದಶಕಗಳ ಕಾಲ ನಡೆದ ಈ ಪ್ರತ್ಯೇಕತಾವಾದದ ಹೋರಾಟವನ್ನು ಕೊನೆಗಾಣಿಸುವ ಉದ್ದೇಶದಿಂದ ಕೇಂದ್ರ ಹಾಗೂ ಅಸ್ಸೋಂ ಸರ್ಕಾರಗಳು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಬೊಡೊ ರಂಗದ (ನ್ಯಾಷನಲ್‌ ಡೆಮಾಕ್ರಟಿಕ್‌ ಫ್ರಂಟ್‌ ಆಫ್‌ ಬೊಡೊಲ್ಯಾಂಡ್‌ –ಎನ್‌ಡಿಎಫ್‌ಬಿ) ಜೊತೆ ಬೊಡೊ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿವೆ.

ನವದೆಹಲಿಯಲ್ಲಿ ಗೃಹ ಸಚಿವ ಅಮಿತ್‌‌ ಶಾ ಸಮ್ಮುಖದಲ್ಲಿ ಎನ್‌ಡಿಎಫ್‌ಬಿ ಜೊತೆಗೆ ಅಖಿಲ ಭಾರತ ಬೊಡೊ ವಿದ್ಯಾರ್ಥಿಗಳ ಒಕ್ಕೂಟ (ಆಲ್‌ ಬೊಂಡೊ ಸ್ಟೂಡೆಂಟ್ಸ್‌ ಯೂನಿಯನ್‌-ಎಬಿಎಸ್‌ಯು) ಮತ್ತು ಬೊಡೊ ಜನರ ಸಂಯುಕ್ತ ಸಂಘಟನೆಗಳು (ಯುನೈಟೆಡ್‌ ಬೊಡೊ ಪೀಪಲ್ಸ್‌ ಆರ್ಗನೈಝೇಶನ್‌–ಯುಬಿಪಿಒ) ಕೂಡಾ ಶಾಂತಿ ಒಪ್ಪಂದಕ್ಕೆ ಸಹಿ ಮಾಡಿವೆ. ಪ್ರತ್ಯೇಕತಾವಾದ ಪ್ರಸ್ತುತತೆ ಕಳೆದುಕೊಂಡಿದ್ದು, ಅಸ್ಸೋಂನ ಭೌಗೋಳಿಕ ಸಮಗ್ರತೆ ಅಬಾಧಿತವಾಗಿದೆ ಎಂದು ಅಮಿತ್‌ ಶಾ ಹೇಳಿಯಾಗಿದೆ.

ಒಪ್ಪಂದದ ಪ್ರಕಾರ, ಸದ್ಯ ಅಸ್ತಿತ್ವದಲ್ಲಿರುವ ಬೊಡೊಲ್ಯಾಂಡ್‌ ಭೌಗೋಳಿಕ ಪ್ರದೇಶದ ಜಿಲ್ಲೆಗಳನ್ನು (ಬೊಡೊಲ್ಯಾಂಡ್‌ ಟೆರಿಟೋರಿಯಲ್‌ ಏರಿಯಾ ಡಿಸ್ಟ್ರಿಕ್ಟ್ಸ್‌–ಬಿಟಿಎಡಿ) ಬೊಡೊಲ್ಯಾಂಡ್‌ ಭೌಗೋಳಿಕ ಪರಿಷತ್ (ಬೊಡೊಲ್ಯಾಂಡ್‌ ಟೆರಿಟೋರಿಯಲ್‌ ಕೌನ್ಸಿಲ್‌–‌ಬಿಟಿಸಿ) ಎಂದು ಮರುನಾಮಕರಣ ಮಾಡಲಾಗುವುದು. ಜನಗಣತಿ ಆಧಾರದ ಮೇಲೆ, ಬಿಟಿಎಡಿ ಪಕ್ಕದ 3,000 ಹಳ್ಳಿಗಳನ್ನು ಸೇರ್ಪಡೆ ಮಾಡಲು ಆಯೋಗವೊಂದನ್ನು ರಚಿಸಲಾಗುವುದು. ಈ ಪ್ರದೇಶದಲ್ಲಿ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯ, ರೈಲ್ವೆ ಕೋಚ್‌ ಕಾರ್ಖಾನೆ, ವೈದ್ಯಕೀಯ ಕಾಲೇಜು ಮತ್ತು ಕ್ಯಾನ್ಸರ್‌ ಆಸ್ಪತ್ರೆಗಳನ್ನು ಸ್ಥಾಪಿಸಲಾಗುವುದು.

ಬೆಟ್ಟಪ್ರದೇಶದ ಜಿಲ್ಲೆಗಳಲ್ಲಿ ವಾಸವಾಗಿರುವ ಬೊಡೊ ಜನರನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸುವುದು, ಬೊಡೊ ಭಾಷೆಯನ್ನು ರಕ್ಷಿಸುವ ಉದ್ದೇಶದಿಂದ ಅದನ್ನು ಅಸ್ಸೋಂನ ಅಧಿಕೃತ ಸಹಭಾಷೆಯಾಗಿಸುವ ಅಧಿಸೂಚನೆ ಹೊರಡಿಸುವುದು ಶಾಂತಿ ಒಪ್ಪಂದದ ಮುಖ್ಯ ಅಂಶಗಳಾಗಿವೆ. ಆದರೆ, ಬಿಟಿಎಡಿ ಹಾಗೂ ಅಸ್ಸೋಂನ ಇತರ ಜಿಲ್ಲೆಗಳು ಒಳಪಟ್ಟಂತೆ ಕೇಂದ್ರ ಭೌಗೋಳಿಕ ಪರಿಷತ್‌ ನಿರ್ಮಾಣ ವಿರೋಧಿಸಿ ಹಲವಾರು ಸಂಘಟನೆಗಳು ಅಸ್ಸೋಂ ಬಂದ್‌ಗೆ ಕರೆ ಕೊಟ್ಟಿದ್ದರೆ, ವಿಶೇಷ ರಾಜ್ಯದ ಬೇಡಿಕೆಗಳಿಗೆ ಸಂಬಂಧಿಸಿದಂತೆ ಎಬಿಎಸ್‌ಯು ಇದುವರೆಗೆ ತುಟಿ ಬಿಗಿ ಹಿಡಿದಿದೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಶಾಂತಿ ಒಪ್ಪಂದದ ಸಾರ್ಥಕವಾದೀತೆ ಎಂಬ ಸಂಶಯ ಉಂಟಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟವು ಈಶಾನ್ಯ ಭಾರತವನ್ನು ಬುಡಮಟ್ಟದಿಂದ ಅಲ್ಲಾಡಿಸುತ್ತಿರುವ ಈ ಸಂದರ್ಭದಲ್ಲಿ ಬಿಜೆಪಿ ಪಾಳೆಯಕ್ಕೆ, ಮುಖ್ಯವಾಗಿ ಅಸ್ಸೋಂಗೆ ಈ ಒಪ್ಪಂದ ಕೊಂಚ ಬಿಡುವು ತಂದಿದೆ. ಬೊಡೊಲ್ಯಾಂಡ್‌ ವಿಷಯಕ್ಕೆ ಸಂಬಂಧಿಸಿದಂತೆ, ಕಳೆದ 27 ವರ್ಷಗಳಲ್ಲಿ ಮೂರು ತ್ರಿಪಕ್ಷೀಯ ಒಪ್ಪಂದಗಳಿಗೆ ಸಹಿ ಮಾಡಲಾಗಿದೆ. ಭೌಗೋಳಿಕ ಸಂಕೀರ್ಣತೆ ಮತ್ತು ಗುಂಪುಗಳ ಬೇಡಿಕೆಗಳ ತೀವ್ರತೆಗೆ ಇದು ನಿದರ್ಶನ. 1981ರಲ್ಲಿ ರಂಜನ್‌ ದೈಮರಿ ಪ್ರಾರಂಭಿಸಿದ ಬೊಡೊ ಭದ್ರತಾ ಪಡೆ (ಬೊಡೊ ಸೆಕ್ಯುರಿಟಿ ಫೋರ್ಸ್)‌ ಮತ್ತು ಜನಾಂಗೀಯ ಬುಡಕಟ್ಟುಗಳಿಗಾಗಿ ಪ್ರತ್ಯೇಕ ರಾಜ್ಯ ಸ್ಥಾಪನೆ ಬೇಡಿಕೆ ಮುಂದಿಟ್ಟುಕೊಂಡು ಎಬಿಎಸ್‌ಯು ನಡೆಸಿದ ದಾಳಿಗಳು ಅಸ್ಸೋಂ ರಾಜ್ಯವನ್ನು ಅಲ್ಲಾಡಿಸಿಬಿಟ್ಟಿವೆ. ಮೊದಲು ಬುಡಕಟ್ಟು ಜನರ ರಕ್ಷಣೆ ಹಾಗೂ ಬೊಡೊ ಪ್ರದೇಶಗಳ ಅಭಿವೃದ್ಧಿಯ ಬೇಡಿಕೆಗಳನ್ನಷ್ಟೇ ಹೊಂದಿದ್ದ ಈ ಚಳವಳಿ, ಅಸ್ಸೋಂ ಅನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಘೋಷಿಸಿದ ನಂತರ ಪ್ರತ್ಯೇಕತಾವಾದದ ಸ್ವರೂಪ ಪಡೆದುಕೊಂಡಿತು.

ಸ್ವಾಯತ್ತ ಬೊಡೊಲ್ಯಾಂಡ್‌ ಪರಿಷತ್‌ (ಬೊಡೊಲ್ಯಾಂಡ್‌ ಆಟೊನಾಮಸ್‌ ಕೌನ್ಸಿಲ್‌ - ಬಿಎಸಿ) ರಚನೆ ಉದ್ದೇಶದಿಂದ 1993ರ ಫೆಬ್ರವರಿಯಲ್ಲಿ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದವಾದ ಕೆಲ ಕಾಲದಲ್ಲಿ ಕೂಟದಿಂದ ಹೊರಬಿದ್ದ ಎನ್‌ಡಿಎಫ್‌ಬಿ, ಜನಾಂಗೀಯ ನಿರ್ನಾಮ ಅಭಿಯಾನವನ್ನು ಪ್ರಾರಂಭಿಸಿತು. 2003ರಲ್ಲಿ ನಾಲ್ಕು ಜಿಲ್ಲೆಗಳನ್ನು ಒಳಗೊಂಡ ಬಿಟಿಸಿ ಸ್ಥಾಪನೆಗಾಗಿ ಎರಡನೇ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಆಹ್ವಾನವನ್ನು ಮತ್ತೆ ತಿರಸ್ಕರಿಸಿದ ಎನ್‌ಡಿಎಫ್‌ಬಿ ತನ್ನ ಹಿಂಸಾತ್ಮಕ ಕೃತ್ಯಗಳನ್ನು ಮುಂದುವರಿಸಿತು. ಇತ್ತೀಚಿನ ಮೂರನೇ ಒಪ್ಪಂದವು ಭರವಸೆಯನ್ನು ಮೂಡಿಸಿದ್ದಾಗ್ಯೂ, ಹಿಂದಿನ ಸಂದರ್ಭಗಳಲ್ಲಿ ಆದ ಘಟನೆಗಳು ಮತ್ತೆ ಮರುಕಳಿಸಬಹುದು ಎಂಬ ಅಳುಕನ್ನೂ ತಂದಿದೆ.

ಬ್ರಿಟಿಷರ ಆಡಳಿತದಿಂದ ಸ್ವಾತಂತ್ರ್ಯ ಪಡೆದುಕೊಂಡ ಸಂದರ್ಭದಲ್ಲಿ, ಬ್ರಿಟಿಷ್‌ ಭಾರತದ ಈಶಾನ್ಯ ಪ್ರದೇಶವು ಈಗಿನ ಅಸ್ಸೋಂ ಹಾಗೂ ರಾಜರ ಆಡಳಿತವಿದ್ದ ನಾಗಾಲ್ಯಾಂಡ್‌, ಮೇಘಾಲಯ ಮತ್ತು ಮಿಜೋರಾಂ ರಾಜ್ಯಗಳನ್ನು ಒಳಗೊಂಡಿತ್ತು. ಮಣಿಪುರ ಮತ್ತು ತ್ರಿಪುರಾ ರಾಜ್ಯಗಳು 1956 ರಿಂದ 1972 ರವರೆಗೆ ಕೇಂದ್ರಾಡಳಿತ ಪ್ರದೇಶಗಳಾಗಿಯೇ ಉಳಿದವು.

ಈಶಾನ್ಯ ಪ್ರದೇಶದ ರಾಜ್ಯಗಳನ್ನು ಅಧಿಕೃತವಾಗಿ ಈಶಾನ್ಯ ಪರಿಷತ್‌ ಅಡಿ ತಂದು ಅವುಗಳ ಅಭಿವೃದ್ಧಿಯ ಹೊಣೆಯನ್ನು ನಿಭಾಯಿಸುವ ಏಜೆನ್ಸಿಯಾಗಿ ಅದನ್ನು ಗುರುತಿಸಲಾಗಿತ್ತು. ಆದರೆ, 238 ಜನಾಂಗೀಯ ಗುಂಪುಗಳ ಆಡಂಬೊಲವಾಗಿರುವ ಈ ಪ್ರದೇಶವು ಅತಿಕ್ರಮಣ ಹಾಗೂ ಸಾಂಸ್ಕೃತಿಕ ದಮನಕ್ಕೆ ಒಳಗಾಗುವ ಭೀತಿಯನ್ನು ಸತತವಾಗಿ ಎದುರಿಸುತ್ತಲೇ ಬಂದಿದೆ. ದೇಶದ ಇತರ ಭಾಗಗಳಿಗೆ ಹೋಲಿಸಿದರೆ ಅಭಿವೃದ್ಧಿಯಾಗದ ಅಳುಕು ಹಾಗೇ ಉಳಿದುಕೊಂಡು ಬಂದಿದ್ದು ನಿರಂತರ ಸಾಮಾಜಿಕ-ರಾಜಕೀಯ ಹೋರಾಟಗಳಿಗೆ ಮತ್ತೊಂದು ಕಾರಣವಾಯಿತು.

ಅಸ್ಸೋಂನಲ್ಲಿ ಶಾಂತಿ ನೆಲೆಸುವಂತೆ ಮಾಡುವ ಕುರಿತು ಕೇಂದ್ರ ಸರ್ಕಾರ ಆಶಾವಾದ ಹೊಂದಿದ್ದರೂ, ನಾಥ್-ಯೋಗಿ ಸಮುದಾಯ ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಹೊಸ ಬೇಡಿಕೆ ಶುರು ಮಾಡಿದೆ. ಈ ಮಧ್ಯೆ ಗಾರೊಸ್‌ ಎಂಬ ಮೂಲನಿವಾಸಿ ಬುಡಕಟ್ಟು ಜನಾಂಗವು ತಮ್ಮ ಹಕ್ಕುಗಳಿಗಾಗಿ ಸ್ವಾಯತ್ತ ಪರಿಷತ್‌ ಸ್ಥಾಪನೆಗಾಗಿ ಬೇಡಿಕೆ ಇಟ್ಟಿವೆ. ಇವುಗಳ ನಡುವೆ ಬೊಡೊಗಳ ಕುರಿತು ಸರ್ಕಾರ ಹೊಂದಿರುವ ನಿಲುವಿಗೆ ಸಂಬಂಧಿಸಿದಂತೆ ಹಲವಾರು ಇತರ ಗುಂಪುಗಳು ಕುಪಿತಗೊಂಡಿವೆ. ಈ ಹಿನ್ನೆಲೆಯಲ್ಲಿ, ಈ ಎಲ್ಲ ಸಮುದಾಯಗಳನ್ನು ಒಳಗೊಂಡ ಹಾಗೂ ಅವೆಲ್ಲವುಗಳ ನಡುವೆ ಶಾಂತಿ ನೆಲೆಸುವಂತೆ ಮಾಡುವ ಸರ್ವಸಮ್ಮತ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಬೇಕಿದೆ.

ABOUT THE AUTHOR

...view details