ಖಗರಿಯಾ / ಪಾಟ್ನಾ: ಬಿಹಾರದ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಮೂರು ದೋಣಿ ದುರಂತದಲ್ಲಿ ಕನಿಷ್ಠ 15 ಮಂದಿ ನೀರು ಪಾಲಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖಗೇರಿಯಾ ಜಿಲ್ಲೆಯಲ್ಲಿ ದೋಣಿ ಮಗುಚಿ ಹತ್ತು ಮಂದಿ ಮೃತಪಟ್ಟಿರುವ ವರದಿಯಾಗಿದೆ. ಸಹರ್ಸಾದಲ್ಲಿ ಮೂವರು ಮತ್ತು ದರ್ಭಂಗ್ನಲ್ಲಿ ಎರಡು ಸಾವು ಸಂಭವಿಸಿವೆ. ಮಂಗಳವಾರ ತಡರಾತ್ರಿ ಮಾನ್ಸಿ ಪೊಲೀಸ್ ಠಾಣಾ ಪ್ರದೇಶದಲ್ಲಿ ಬರುವ ಗಂಡಕ್ ನದಿಯಲ್ಲಿ ದೋಣಿ ಅಪಘಾತಕ್ಕೀಡಾಗಿ 10 ಮಂದಿ ಸಾವನ್ನಪ್ಪಿದ್ದಾರೆ.
ಸುಮಾರು 30 ಮಂದಿ ದೋಣಿಯಲ್ಲಿ ನದಿ ದಾಟುತ್ತಿದ್ದರು ಎಂದು ಖಗೇರಿಯಾ ಜಿಲ್ಲಾಧಿಕಾರಿ ಅಲೋಕ್ ರಂಜನ್ ಘೋಷ್ ಹೇಳಿದ್ದಾರೆ. 12 ಜನರು ಈಜಿ ದಡ ಸೇರಿದರೆ, ಇನ್ನುಳಿದವರ ಮಾಹಿತಿ ಸಿಕ್ಲಿಲ್ಲ ಎಂದು ಅವರು ತಿಳಿಸಿದ್ದು, ರಾಜ್ಯ ವಿಪತ್ತು ಪಡೆ ನಾಪತ್ತೆಯಾದವರಿಗಾಗಿ ತೀವ್ರ ಶೋಧ ನಡೆಸಿದೆ.
ಮೃತಪಟ್ಟ ಹತ್ತು ಜನರಲ್ಲಿ ಐದು ಮಹಿಳೆಯರು ಮತ್ತು ಐದು ಪುರುಷರು ಸೇರಿದ್ದಾರೆ. ಇದರಲ್ಲಿ 10 ವರ್ಷದ ಬಾಲಕ ಮತ್ತು 12 ವರ್ಷದ ಬಾಲಕಿಯೂ ಇದ್ದಾರೆ. ದರ್ಭಂಗದ ಹಯಘಾಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂತಹುದೇ ಮತ್ತೊಂದು ಘಟನೆ ನಡೆದಿದ್ದು, ಇಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಮಂಗಳವಾರ ರಾತ್ರಿ 13 ಜನರನ್ನು ಕರೆದೊಯ್ಯುತ್ತಿದ್ದ ದೋಣಿ ಕರೇಹ್ ನದಿಯಲ್ಲಿ ಪಲ್ಟಿಯಾಗಿತ್ತು. 10 ಜನ ಈಜಿ ಸುರಕ್ಷಿತವಾಗಿ ದಡ ಮುಟ್ಟಿದರೆ ಇಬ್ಬರು ಮೃತಪಟ್ಟಿದ್ದಾರೆ. 16 ವರ್ಷದ ಬಾಲಕ ಇನ್ನೂ ಪತ್ತೆಯಾಗಿಲ್ಲ. ಆತನಿಗಾಗಿ ಶೋಧ ಮುಂದುವರೆದಿದೆ.