ನನ್ನ ತಂದೆಗೆ 57 ವರ್ಷ. ಅವರಿಗೆ ಉಸಿರಾಟದ ಸಮಸ್ಯೆ ಹೆಚ್ಚಾದ ಕಾರಣ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದೆವು. ತಪಾಸಣೆ ನಂತರ ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂದು ವೈದ್ಯರು ಹೇಳಿದ್ದಾರೆ. ಆದರೆ, ರಕ್ತ ಹೆಪ್ಪುಗಟ್ಟಲು ನಿಖರವಾದ ಕಾರಣವೇನು? ಇದಕ್ಕೆ ಪರಿಹಾರವೇನು? ಯಾವ ರೀತಿಯ ಮುನ್ನೆಚ್ಚರಿಕಾ ಕ್ರಗಳನ್ನು ತೆಗೆದುಕೊಳ್ಳಬೇಕು ಅನುಸರಿಸಬೇಕಾದ ಕ್ರಮಗಳೇನು? ದಯವಿಟ್ಟು ವಿವರಿಸಿ ಎಂದು ವ್ಯಕ್ತಿಯೊಬ್ಬರು ಕೇಳಿದ್ದಾರೆ.
ಪರಿಹಾರ:ನಿಮ್ಮ ತಂದೆಗೆ ಪಲ್ಮನರಿ ಎಂಬಾಲಿಸಮ್ (ಪಿಇ) ಇದೆ. ಇದು ಶ್ವಾಸಕೋಶದ ಸಮಸ್ಯೆ ಎನಿಸಿದರೂ, ಇದರ ಮೂಲ ಕಾಲಿನ ರಕ್ತನಾಳಗಳಲ್ಲಿ ಇರುತ್ತದೆ. ದೇಹದಲ್ಲಿ ಅಶುದ್ಧ ರಕ್ತವು ರಕ್ತನಾಳಗಳ ಮೂಲಕ ಹೃದಯಕ್ಕೆ ಸಾಗುತ್ತದೆ. ಅಲ್ಲಿಂದ ಅಪಧಮನಿಗಳ ಮೂಲಕ ಶ್ವಾಸಕೋಶ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ತಲುಪುತ್ತದೆ. ಇದು ನಿರಂತರ ಪ್ರಕ್ರಿಯೆ. ಆದರೆ, ಕೆಲವರಿಗೆ ಮೀನಖಂಡ ಮತ್ತು ತೊಡೆಯಲ್ಲಿ ಸಣ್ಣದಾಗಿ ರಕ್ತ ಹೆಪ್ಪುಗಟ್ಟುತ್ತದೆ. ಇದರಿಂದ ರಕ್ತ ಸಂಚಾರ ನಿಧಾನಗತಿಯಲ್ಲಿ ಸಾಗುತ್ತದೆ. ರಕ್ತನಾಳಗಳಿಗೆ ಹಾನಿ ಮತ್ತು ರಕ್ತ ದಪ್ಪ ಆಗುತ್ತದೆ.
ಗಂಟೆಗಳ ಕಾಲ ಕೈ-ಕಾಲುಗಳ ಚಲನವಲನ ನಡೆಸದೇ ಒಂದೇ ಕಡೆ ಕುಳಿತುಕೊಳ್ಳುವವರಿಗೆ ಈ ಸಮಸ್ಯೆ ಕಂಡುಬರುತ್ತದೆ. ಕೆಲವು ಬಾರಿ ಕಾಲಿನ ರಕ್ತನಾಳಗಳಲ್ಲಿ ಕಟ್ಟಿಕೊಂಡ ರಕ್ತ ಸ್ಥಳ ಬದಲಿಸಿ, ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿ ಶ್ವಾಸಕೋಶದ ರಕ್ತನಾಳದಲ್ಲಿ ಸಿಲುಕಿಕೊಳ್ಳುತ್ತದೆ. ಇದರಿಂದ ಶ್ವಾಸಕೋಶದ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ. ಸೂಕ್ತ ಆಮ್ಲಜನಕ ಪಡೆಯದೇ ಹೃದಯಕ್ಕೆ ರಕ್ತ ವಾಪಸಾಗುತ್ತದೆ. ರಕ್ತದಲ್ಲಿ ಸಾಕಷ್ಟು ಆಮ್ಲಜನಕ ಇಲ್ಲದ ಕಾರಣ ಉಸಿರಾಟಕ್ಕೆ ತೊಂದರೆಯಾಗುತ್ತದೆ.
ಶ್ವಾಸಕೋಶ ಸಂಕುಚಿತವಾಗಿ ಎದೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ರಕ್ತ ಹೆಪ್ಪುಗಟ್ಟಿರುವ ಶಂಕೆ ಉಂಟಾದರೆ ಡಿ-ಡಿಮ್ಮರ್ ಎಂಬ ಚಿಕಿತ್ಸೆ ಪಡೆಯಬೇಕಾಗುತ್ತದೆ. ಹಾಗೂ ಶ್ವಾಸಕೋಶದ ಆಂಜಿಯೋಗ್ರಾಮ್ ಪರೀಕ್ಷೆ ಮಾಡಲಾಗುತ್ತದೆ. ಸಮಸ್ಯೆ ಖಚಿತವಾದರೆ ಸಲೈನ್‌ನೊಂದಿಗೆ ಮಿಶ್ರಣ ಮಾಡಿ ಹೆಪಾರಿನ್ (ಪೊರ್ಸಿನ್) ಎಂಬ ಔಷಧವನ್ನು ದೀರ್ಘಾವಧಿಯವರೆಗೆ ನೀಡಲಾಗುತ್ತದೆ. ಪ್ರಸ್ತುತ ದಿನಗಳಲ್ಲಿ 24 ಗಂಟೆಗಳ ಕಾಲ ಕೆಲಸ ಮಾಡುವವರಿಗೆ ಹೆಪಾರಿನ್ ಚುಚ್ಚು ಮದ್ದುಗಳು ಲಭ್ಯವಿವೆ. ಸಮಸ್ಯೆಯ ತೀವ್ರತೆ ಕಡಿಮೆಯಾದರೆ ಆರು ತಿಂಗಳು ಬಳಸಲು ಹೆಪಾರಿನ್ ಮಾತ್ರೆಗಳನ್ನು ನೀಡುತ್ತಾರೆ. ಸಮಸ್ಯೆ ಮತ್ತೆ ಕಂಡುಬರದಂತೆ ನಂತರ ಎಚ್ಚರಿಕೆ ವಹಿಸಬೇಕಾಗುತ್ತದೆ.
ಸಮಸ್ಯೆ ತೀವ್ರಗೊಂಡು ಉಸಿರಾಟಕ್ಕೆ ಕಷ್ಟವಾದರೆ ಆಂಜಿಯೋಪ್ಲಾಸ್ಟಿ ಪರೀಕ್ಷೆ ಮಾಡಲಾಗುತ್ತದೆ. ಇದರಲ್ಲಿ ರಕ್ತಹೆಪ್ಪುಗಟ್ಟಿದ ಜಾಗದವರೆಗೂ ಸಣ್ಣ ಟ್ಯೂಬೊಂದರ ಮೂಲಕ ಎನ್ಝೈಮ್ ಚುಚ್ಚುಮದ್ದು ನೀಡಲಾಗುತ್ತದೆ. ಆಗ ಹೆಪ್ಪುಗಟ್ಟಿದ ರಕ್ತ ಚದುರುತ್ತದೆ. ನಿಮ್ಮ ತಂದೆ ಈಗಾಗಲೇ ಹೆಪಾರಿನ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೆ, ಉತ್ತಮ ಕಾಳಜಿ ವಹಿಸಬೇಕು.
ಸರಿಯಾದ ಡೋಸ್‌ನಲ್ಲೇ ಮಾತ್ರೆ ಸೇವಿಸಬೇಕು. ಡೋಸ್ ಹೆಚ್ಚಾದರೆ, ಸಣ್ಣ ಗಾಯವಾದರೂ ರಕ್ತಸ್ರಾವ ಉಂಟಾಗುತ್ತದೆ. ಇದೇ ಕಾರಣಕ್ಕೆ ವೈದ್ಯರು ಪದೇ ಪದೇ ಪರೀಕ್ಷೆ ಮಾಡಿ ಡೋಸೇಜ್ ಸರಿಯಾಗಿದೆಯೇ, ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಕಾಲಿನ ರಕ್ತನಾಳಗಳಲ್ಲಿ ಹೆಪ್ಪುಗಟ್ಟುವಿಕೆ ತಡೆಯಲು ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಕಾರು ಮತ್ತು ವಿಮಾನಗಳಲ್ಲಿ ಪ್ರಯಾಣ ಬೆಳೆಸುವವರು ಆಗಾಗ್ಗೆ ಎದ್ದು ಓಡಾಡಬೇಕು. ತೊಡೆ ಮತ್ತು ಮೀನಖಂಡದ ಮೇಲೆ ಒತ್ತಡ ಹಾಕದೇ ಎಚ್ಚರಿಕೆ ವಹಿಸಬೇಕು.
-ಡಾ.ಆರ್.ವಿಜಯ್‌ಕುಮಾರ್, ಶ್ವಾಸಕೋಶ ತಜ್ಞ