ನವದೆಹಲಿ:ಕೇಂದ್ರದ ಬಿಜೆಪಿ ಸರ್ಕಾರ ಕೊರೊನಾ ವೈರಸ್ ನಿಭಾಯಿಸುವುದನ್ನು ಹೊರತುಪಡಿಸಿ ಬೇರೆಲ್ಲ ಅನಗತ್ಯ ವಿಷಯಗಳ ಬಗ್ಗೆ ಗಮನಹರಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೋದಿ ನೇತೃತ್ವದ ಸರ್ಕಾರ ಹಮ್ಮಿಕೊಂಡ ಕಾರ್ಯಕ್ರಮಗಳ ಬಗ್ಗೆ ತಮ್ಮ ಟ್ವೀಟ್ನಲ್ಲಿ ಪಟ್ಟಿ ಮಾಡಿರುವ ರಾಹುಲ್ ಗಾಂಧಿ ನಮಸ್ತೆ ಟ್ರಂಪ್ ಹಾಗೂ ರಾಜಸ್ಥಾನದಲ್ಲಿ ಸರ್ಕಾರ ಉರುಳಿಸುವ ಬಿಜೆಪಿ ಯತ್ನವನ್ನು ಕಾರ್ಯಕ್ರಮಗಳು ಎಂದು ಟೀಕಿಸಿದ್ದಾರೆ. ಇದರ ಜೊತೆಗೆ ಮೋದಿಯ ಆತ್ಮ ನಿರ್ಭರ ಯೋಜನೆಯ ಬಗ್ಗೆ ವ್ಯಂಗ್ಯವಾಡಿದ್ದಾರೆ. ಇದೇ ಕೇಂದ್ರ ಬಿಜೆಪಿ ಸರ್ಕಾರದ ಸಾಧನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫೆಬ್ರವರಿಯಲ್ಲಿ ನಮಸ್ತೆ ಟ್ರಂಪ್, ಮಾರ್ಚ್ನಲ್ಲಿ ಮಧ್ಯಪ್ರದೇಶ ಸರ್ಕಾರ ಪತನ, ಏಪ್ರಿಲ್ನಲ್ಲಿ ಮೇಣದ ಬತ್ತಿ ಹಚ್ಚುವ ಕಾರ್ಯಕ್ರಮ ಹಾಗೂ ಮೇ ತಿಂಗಳಿನಲ್ಲಿ ಕೇಂದ್ರ ಬಿಜೆಪಿ ಸರ್ಕಾರ 6 ವರ್ಷ ಪೂರೈಸಿದ ಸಮಾರಂಭ, ಜೂನ್ ತಿಂಗಳಲ್ಲಿ ಬಿಹಾರದಲ್ಲಿ ವರ್ಚುವಲ್ ರ‍್ಯಾಲಿ ಹಾಗೂ ಜೂನ್ನಲ್ಲಿ ರಾಜಸ್ಥಾನ ಸರ್ಕಾರವನ್ನು ಉರುಳಿಸುವ ಪ್ರಯತ್ನ ಮಾಡಿರುವುದೇ ಬಿಜೆಪಿ ಸಾಧನೆ ಎಂದು ವ್ಯಂಗ್ಯವಾಡಿದ್ದಾರೆ. ಇದರಿಂದಾಗಿಯೇ ಆತ್ಮ ನಿರ್ಭರ ಯೋಜನೆಯನ್ನು ಕೊರೊನಾ ವೈರಸ್ ವೇಳೆ ಘೋಷಿಸಲಾಗಿದೆ ಎಂದು ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ.
ಇದಕ್ಕೂ ಮೊದಲು ರಾಹುಲ್ ಗಾಂಧಿ ಚೀನಾ - ಭಾರತದ ನಡುವಿನ ಸಂಘರ್ಷದ ಬಗ್ಗೆ ಕಿರುಚಿತ್ರಗಳ ಸರಣಿಯನ್ನು ಬಿಡುಗಡೆ ಮಾಡಿದ್ದರು. ಈ ವಿಡಿಯೋವೊಂದನ್ನು ಟ್ವೀಟ್ನಲ್ಲಿ ಹಂಚಿಕೊಂಡಿದ್ದ ಅವರು ಪ್ರಧಾನಿ ಪ್ರಬಲವಾಗಿದ್ದಾರೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಬೊಟ್ಟು ಮಾಡಿದ ರಾಹುಲ್ ಇಂತಹ ಪ್ರಧಾನಿಯನ್ನು ಹೊಂದಿರುವುದು ಭಾರತದ ದುರ್ಬಲತೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು
ಇದರ ಜೊತೆಗೆ ವಿಡಿಯೋವೊಂದರಲ್ಲಿ ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯನ್ನು ಪ್ರಶ್ನಿಸಿದ್ದರು. ಲಡಾಖ್ ವಿಚಾರದಲ್ಲಿ ಪ್ರಧಾನಿ ಮೋದಿ ಅಸಮರ್ಥತೆಯನ್ನು ಟೀಕಿಸಿದ್ದರು. ಈಗ ಟ್ವೀಟ್ ಮಾಡಿದ್ದು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.