ನವದೆಹಲಿ:ಸ್ವಲ್ಪ ಸಮಯ ತೆಗೆದುಕೊಂಡು ದೆಹಲಿ ಸರ್ಕಾರ ನಡೆಸುತ್ತಿರುವ ಶಾಲೆಗಳಿಗೆ ಭೇಟಿ ನೀಡುವಂತೆ ಮುಖ್ಯಮಂತ್ರಿ ಅರವಿಂದ್ ಕ್ರೇಜ್ರಿವಾಲ್ ನೀಡಿರುವ ಆಹ್ವಾನಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಗೆ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅಮಿತ್ ಶಾ, "ಅರವಿಂದ್ ಕೇಜ್ರಿವಾಲ್ ಅವರೇ ನೀವು ದೆಹಲಿ ಸರ್ಕಾರ ನಡೆಸುತ್ತಿರುವ ಶಾಲೆಗಳಿಗೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದೀರಿ. ದೆಹಲಿಯ 8 ಬಿಜೆಪಿ ಸಂಸದರು ದೆಹಲಿಯ ವಿವಿಧ ಶಾಲೆಗಳಿಗೆ ಭೇಟಿ ನೀಡಿ ನಿಮ್ಮ ಶೈಕ್ಷಣಿಕ ಕ್ರಾಂತಿಯನ್ನು ಕಣ್ತುಂಬಿಕೊಂಡಿದ್ದಾರೆ. ಈಗ ದೆಹಲಿಯ ಜನತೆಗೆ ನೀವು ಉತ್ತರ ಕೊಡಬೇಕು" ಎಂದು ಟಾಂಗ್ ನೀಡಿದ್ದಾರೆ.
ಅಮಿತ್ ಶಾ ಟ್ವೀಟ್ ಮಾಡಿದ ಒಂದು ದಿನದ ಹಿಂದೆ ಬಿಜೆಪಿ ಸಂಸದರು ದೆಹಲಿಯ ಶಾಲೆಗಳಿಗೆ ಭೇಟಿ ನೀಡಿದ ತಮ್ಮ ಅನುಭವಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅಲ್ಲದೇ, ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ, ಸರಣಿ ಫೋಟೊಗಳನ್ನು ಟ್ವೀಟ್ ಮಾಡಿದ್ದು, ಇದರಲ್ಲಿ ವಿದ್ಯಾರ್ಥಿಗಳು ತರಗತಿಯಿಂದ ಹೊರಗೆ ನಿಂತಿರುವುದು ಮತ್ತು ಊಟದ ವಿರಾಮ ಸೇರಿ ದಿನದಲ್ಲಿ ಕೇವಲ ಎರಡು ಗಂಟೆ ತರಗತಿ ನಡೆಯುವುದು ಸೇರಿದಂತೆ ದೆಹಲಿಯ ಸರ್ಕಾರಿ ಶಾಲೆಗಳ ಸ್ಥಿತಿಗತಿಗಳ ಬಗ್ಗೆ ಹಂಚಿಕೊಂಡಿದ್ದರು.