ನವದೆಹಲಿ:ನಾಥೂರಾಮ್ ಗೋಡ್ಸೆಯನ್ನು 'ದೇಶಭಕ್ತ' ಎಂದು ಹೇಳಿದ ವಿಚಾರಕ್ಕೆ ಸಂಸದೆ ಪ್ರಗ್ಯಾ ಸಿಂಗ್ ವಿರುದ್ಧ ಬಿಜೆಪಿ ಸಮನ್ಸ್ ಜಾರಿ ಬೆನ್ನಲ್ಲೇ ಲೋಕಸಭೆಯಲ್ಲಿ ಭೋಪಾಲ್ ಸಂಸದೆ ಕ್ಷಮೆ ಕೇಳಿದ್ದಾರೆ.
"ನನಗೆ ಮಹಾತ್ಮ ಗಾಂಧಿ ದೇಶಕ್ಕಾಗಿ ಹಲವು ಕೊಡುಗೆ ನೀಡಿದ್ದಾರೆ, ಅವರ ಬಗ್ಗೆ ನನಗೆ ಗೌರವವಿದೆ. ನನ್ನ ಮಾತು ಯಾರಿಗಾದರೂ ನೋವಾಗಿದ್ದಲ್ಲಿ ಕ್ಷಮೆ ಕೇಳುತ್ತೇನೆ" ಎಂದು ಬಿಜೆಪಿ ಸಂಸದೆ ಪ್ರಗ್ಯಾ ಲೋಕಸಭೆ ಕಲಾಪದಲ್ಲಿ ಹೇಳಿದ್ದಾರೆ.
ಪ್ರಗ್ಯಾ ಕ್ಷಮೆಯಾಚನೆ ವೇಳೆ ವಿಪಕ್ಷಗಳು ಕೊಂಚ ಗದ್ದಲ ನಡೆಸಿದ್ದು, 'ಮಹಾತ್ಮ ಗಾಂಧಿ ಕಿ ಜೈ, ಡೌನ್ ಡೌನ್ ಗೋಡ್ಸೆ' ಎಂದು ಘೋಷಣೆ ಕೂಗಿದವು.
ಲೋಕಸಭೆಯಲ್ಲಿ ಮಾತನಾಡುವ ವೇಳೆ ಗಾಂಧಿ ಹಂತಕನನ್ನು ಪ್ರಗ್ಯಾ ದೇಶಭಕ್ತ ಎಂದು ಬಣ್ಣಿಸಿದ್ದರು. ಈ ಹೇಳಿಕೆಗೆ ಪಕ್ಷಾತೀತವಾಗಿ ಖಂಡನೆ ವ್ಯಕ್ತವಾಗಿತ್ತು. ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಗ್ಯಾ ಮಾತಿಗೆ ಖಂಡಿಸಿದ್ದರು.