ಶ್ರೀನಗರ (ಜಮ್ಮು ಕಾಶ್ಮೀರ): ಕಾಶ್ಮೀರದಲ್ಲಿ ಉಗ್ರರ ಉಪಟಳ ಹೆಚ್ಚಾಗಿದ್ದು, ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಓರ್ವ ಬಿಜೆಪಿಯಿಂದ ಆಯ್ಕೆ ಆಗಿದ್ದ ಸರಪಂಚ್ನನ್ನು ಅಪರಿಚಿತ ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ.
ಖಾಜಿಗುಂಡ್ ಬ್ಲಾಕ್‌ನ ವೆಸು ಗ್ರಾಮದಲ್ಲಿರುವ ಅಲಿ ಮಹಮ್ಮದ್ ಎಂಬಾತನ ಮಗನಾದ ಸರಪಂಚ್ ಸಜಾದ್ ಅಹ್ಮದ್ ಖಾಂಡೆ ಎಂಬಾತನನ್ನು ಉಗ್ರರು ಕೊಂದು ಪರಾರಿಯಾಗಿದ್ದಾರೆ.
ಮನೆಯಿಂದ ಹೊರಗಡೆ ಇದ್ದಾಗ ಉಗ್ರರು ಫೈರಿಂಗ್ ನಡೆಸಿದ್ದು, ಸಜಾದ್ ಅಹ್ಮದ್ ಖಾಂಡೆ ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅನಂತ್ನಾಗ್ನ ಸರ್ಕಾರಿ ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.
ಇದಕ್ಕೂ ಮೊದಲು ಆಗಸ್ಟ್ 4ರ ಸಂಜೆ ಅಖ್ರಾನ್ ಖಾಜಿಗುಂಡ್ ಎಂಬಲ್ಲಿ ಅಪರಿಚಿತ ಭಯೋತ್ಪಾದಕರು ದಾಳಿ ನಡೆಸಿದ್ದರ ಪರಿಣಾಮವಾಗಿ ಬಿಜೆಪಿ ಸರಪಂಚ್ ಆರೀಫ್ ಅಹಮದ್ ತೀವ್ರವಾಗಿ ಗಾಯಗೊಂಡಿದ್ದರು.
48 ಗಂಟೆಗಳ ಅವಧಿಯಲ್ಲಿ ಬಿಜೆಪಿ ಸರಪಂಚ್ಗಳ ಮೇಲೆ ನಡೆದ ಎರಡನೇ ಭಯೋತ್ಪಾದಕ ದಾಳಿ ಇದಾಗಿದ್ದು, ಪೊಲೀಸರಿಂದ ತನಿಖೆ ನಡೆಯುತ್ತಿದೆ.