ವಾರಣಾಸಿ:ಇಂದು ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಲ್ಲಿ ತಮ್ಮ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಶಿ ವಿಶ್ವನಾಥನ ನಾಡಲ್ಲಿ ಭಾರಿ ಚಟುವಟಿಕೆಗಳು ಗರಿಗೆದರಿವೆ.
ಎನ್ಡಿಎ ಮೈತ್ರಿಕೂಟದ ನಾಯಕರು ವಾರಣಾಸಿಗೆ ಆಗಮಿಸಿದ್ದಾರೆ. ಇನ್ನೊಂದೆಡೆ ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್ನ ನಾಯಕರಾದ ಉದ್ದವ್ ಠಾಕ್ರೆ, ಎಐಎಡಿಎಂಕೆ ನಾಯಕರು ಸೇರಿದಂತೆ ಇನ್ನುಳಿದ ಅಂಗಪಕ್ಷದ ನಾಯಕರು ಅಮಿತ್ ಶಾ ನೇತೃತ್ವದಲ್ಲಿ ಸಭೆ ಸೇರಿದ್ದಾರೆ.
ಈ ಎಲ್ಲ ನಾಯಕರು ಪ್ರಧಾನಿ ಮೋದಿ ಅವರ ನಾಮಪತ್ರ ಸಲ್ಲಿಕೆ ವೇಳೆ ಹಾಜರಿರಲಿದ್ದು, ಒಗ್ಗಟ್ಟು ಪ್ರದರ್ಶನ ಮಾಡಲಿದ್ದಾರೆ. ದೇಶದ ಜನರಿಗೆ ಪ್ರಧಾನಿ ಈ ಮೂಲಕ ತಮ್ಮ ಶಕ್ತಿ ಸಾಮರ್ಥ್ಯವನ್ನ ಮತ್ತೊಮ್ಮೆ ಪ್ರದರ್ಶನ ಮಾಡಲಿದ್ದಾರೆ.
ಇನ್ನು ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಹೋಟೆಲ್ ಒಂದರಲ್ಲಿ ಪ್ರೆಸ್ ಮೀಟ್ ಕರೆದಿದ್ದಾರೆ. ಪ್ರಧಾನಿ ಆಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಅವರು ಒಂದೇ ಒಂದು ಮಾಧ್ಯಮಗೋಷ್ಠಿ ನಡೆಸಿರಲಿಲ್ಲ ಎಂಬ ಆರೋಪ ಎದುರಿಸುತ್ತಿದ್ದರು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇದೇ ವಿಷಯವಾಗಿ ಹಲವು ಬಾರಿ ಟೀಕೆ ಮಾಡಿದ್ದರು. ಸುದ್ದಿಗೋಷ್ಠಿ ಕರೆದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸುವಂತೆ ಸವಾಲು ಕೂಡಾ ಹಾಕಿದ್ದರು. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ನರೇಂದ್ರ ಮೋದಿ, ಈಗ ಮಾತ್ರ ಸುದ್ದಿಗೋಷ್ಠಿ ನಡೆಸುವುದಾಗಿ ಘೋಷಿಸಿದ್ದಾರೆ. ಹೀಗಾಗಿ ಇದು ತೀವ್ರ ಕುತೂಹಲ ಕೆರಳಿಸಿದೆ.