ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿ ಅವರ 70ನೇ ಹುಟ್ಟುಹಬ್ಬದ ನಿಮಿತ್ತ ಸಾರ್ವಜನಿಕ ಸೇವೆಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಬಿಜೆಪಿ ಯೋಜಿಸುತ್ತಿದೆ.
ಬಲ್ಲ ಮೂಲಗಳ ಪ್ರಕಾರ, ಸೆಪ್ಟೆಂಬರ್ 17ರಂದು ಮೋದಿಯವರ ಜನ್ಮದಿನದಂದು ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಸಾರ್ವಜನಿಕ ಸೇವೆಗಳನ್ನು ನಡೆಸುವಂತೆ ಕಾರ್ಯಕರ್ತರಿಗೆ ಪಕ್ಷವು ತಾಕೀತು ಮಾಡಿದೆ.
ಪ್ರತಿ ವರ್ಷದಂತೆ ಮುಂದಿನ ತಿಂಗಳು ಪ್ರಧಾನಿ ಮೋದಿ ಜನ್ಮದಿನವನ್ನು ಸೇವಾ ದಿವಸ್ (ಸೇವಾ ದಿನ) ಎಂದು ಆಚರಿಸಲು ಬಿಜೆಪಿ ಸಜ್ಜಾಗಿದೆ. ಫೇಸ್ಮಾಸ್ಕ್, ಸ್ಯಾನಿಟೈಸರ್, ಔಷಧಿ, ಆಹಾರ ಮತ್ತು ಹಣ್ಣುಗಳ ವಿತರಣೆಯಂತಹ ಸಮಾಜಮುಖಿ ಕಾರ್ಯಕ್ರಮಗಳು ನಡೆಯಲಿವೆ. ಕೆಲವು ಪ್ರದೇಶಗಳಲ್ಲಿ ಬಟ್ಟೆ ಮತ್ತು ಪಡಿತರ ಸಹ ವಿತರಿಸಲಾಗುವುದು. 70 ಸ್ಥಳಗಳಲ್ಲಿ 70 ರಕ್ತದಾನ ಶಿಬಿರಗಳನ್ನು ಹೊಂದಿರುವಂತೆ 70ನೇ ಸಂಖ್ಯೆಯನ್ನು ವಿಷಯವನ್ನಾಗಿ ಆಚರಿಸಬೇಕು ಎಂದು ಅನೇಕ ನಾಯಕರು ಹೈಕಮಾಂಡ್‌ಗೆ ಸೂಚಿಸಿದ್ದಾರೆ.
ಮಂಗಳವಾರ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪ್ರಧಾನಿ ಮೋದಿಯವರ ಜನ್ಮದಿನ, ಸೆಪ್ಟೆಂಬರ್ 25ರಂದು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮ ದಿನಾಚರಣೆ ಮತ್ತು ಅಕ್ಟೋಬರ್ 2ರಂದು ಗಾಂಧಿ ಜಯಂತಿ ಒಟ್ಟಿಗೆ ಮೆಗಾ ಸೇವಾ ಆಚರಣೆಯನ್ನಾಗಿ ಮಾಡಲು ನಿರ್ಧರಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸೆಪ್ಟೆಂಬರ್ 17ರಿಂದ ಚಾಲನೆ ನೀಡಿ ಅಕ್ಟೋಬರ್ 2ರವರೆಗೆ ನಡೆಯಲಿವೆ. ಜನ್ಮದಿನದ ಸಮಯದಲ್ಲಿ ಸಾಂಕ್ರಾಮಿಕ ರೋಗದ ಬಿಕ್ಕಟ್ಟನ್ನು ಮುಂದಿಟ್ಟುಕೊಂಡು ಉತ್ತಮ ಕಾರ್ಯಗಳನ್ನು ಹೈಲೈಟ್ ಮಾಡಲು ಪಕ್ಷ ಯೋಜಿಸಿದೆ.
ಕಳೆದ ವರ್ಷ ಪ್ರಧಾನಿ ಮೋದಿಯವರ ಜನ್ಮದಿನ ಹಿನ್ನೆಲೆ ಪಕ್ಷವು ಸೆಪ್ಟೆಂಬರ್ 14ರಿಂದ 20ರವರೆಗೆ ಸೇವಾ ಸಪ್ತ (ಸೇವಾ ವಾರ) ಎಂದು ಆಚರಿಸಿತ್ತು.
ಪ್ರಧಾನಿ ಮೋದಿ ಅವರು ಸಾರ್ವಜನಿಕ ಸೇವಕರಾಗಿದ್ದರು, ಜನಸಾಮಾನ್ಯರಲ್ಲಿ ಬಹು ಜನಪ್ರಿಯರಾಗಿದ್ದಾರೆ. ಆದ್ದರಿಂದ ಅವರ ಜನ್ಮದಿನವನ್ನು ಸೇವಾ ದಿವಸ್ ಎಂದು ಆಚರಿಸುವುದು ಸೂಕ್ತವಾಗಿದೆ ಎಂದು ಬಿಜೆಪಿ ವಕ್ತಾರ ಸುದೇಶ್ ವರ್ಮಾ 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.