ಗೋರಖ್‌ಪುರ(ಯುಪಿ): ದೇಶಾದ್ಯಂತ ಭೀತಿ ಹುಟ್ಟಿಸಿರುವ ಮಹಾಮಾರಿ ಕೊರೊನಾ ವಿರುದ್ಧದ ಹೋರಾಟ ಮುಂದುವರೆದಿದ್ದು, ಇದರ ಮಧ್ಯೆ ಬಿಜೆಪಿ ಶಾಸಕರೊಬ್ಬರು ವಿವಾದಿತ ಹೇಳಿಕೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಉತ್ತರಪ್ರದೇಶದ ಬರ್ಹಾಜ್ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ತಿವಾರಿ ಈ ಹೇಳಿಕೆ ನೀಡಿದ್ದು, ಅದರ ವಿಡಿಯೋ ತುಣುಕು ಎಲ್ಲೆಡೆ ವೈರಲ್ ಆಗಿದೆ.
ಶಾಸಕ ಹೇಳಿದ್ದೇನು!?
ಯಾವುದೇ ಕಾರಣಕ್ಕೂ ಮುಸ್ಲಿಂ ಮಾರಾಟಗಾರರಿಂದ ತರಕಾರಿ ಖರೀದಿ ಮಾಡಬೇಡಿ. ಈ ಮಾತನ್ನು ನಾನು ಎಲ್ಲರ ಸಮ್ಮುಖದಲ್ಲೇ ಹೇಳುತ್ತಿರುವೆ ಎಂದಿದ್ದಾರೆ.
ಬಿಜೆಪಿ ಶಾಸಕನ ವಿವಾದಿತ ಹೇಳಿಕೆ ಸಮರ್ಥನೆ ನೀಡಿದ ಶಾಸಕ
ಇದೇ ವಿಷಯವಾಗಿ ಪ್ರಶ್ನೆ ಮಾಡಿದಾಗ, ಏಪ್ರಿಲ್ 17, 18ರಂದು ನಾನು ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣೆ ಮಾಡ್ತಿದ್ದಾಗ, ನನ್ನ ಬಳಿ ಬಂದ ಕೆಲವರು ತಬ್ಲಿಘಿಗೆ ತೆರಳಿ ವಾಪಸ್ ಆದ ಕೆಲವರು ತರಕಾರಿ ಮಾರಾಟ ಮಾಡ್ತಿದ್ದು, ಇದರಿಂದ ಕೊರೊನಾ ವೈರಸ್ ಹರಡುತ್ತಿದೆ ಎಂದಿದ್ದರು. ಈ ವೇಳೆ, ನಾನು ಅವರೊಂದಿಗೆ ಯಾವುದೇ ಕಾರಣಕ್ಕೂ ಜಗಳ ಮಾಡಬೇಡಿ. ಅವರು ಮಾರಾಟ ಮಾಡುವ ತರಕಾರಿ ಖರೀದಿ ಮಾಡಬೇಡಿ ಎಂದು ಹೇಳಿರುವೆ ಎಂದಿದ್ದಾರೆ. ನನ್ನ ಕ್ಷೇತ್ರದಲ್ಲಿ ಅನೇಕ ಮುಸ್ಲಿಂ ಮಾರಾಟಗಾರರು ತರಕಾರಿ ಮಾರಾಟ ಮಾಡ್ತಿದ್ದು, ಡೆಡ್ಲಿ ವೈರಸ್ನಿಂದ ಕ್ಷೇತ್ರದ ಜನರ ರಕ್ಷಣೆ ಮಾಡಲು ಈ ರೀತಿ ಹೇಳಿರುವೆ ಎಂದಿದ್ದಾರೆ.
ಇವರ ಹೇಳಿಕೆ ವಿವಾದ ರೂಪ ಪಡೆದುಕೊಳ್ಳುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಉತ್ತರಪ್ರದೇಶ ಬಿಜೆಪಿ ವಕ್ತಾರ ಚಂದ್ರಮೋಹನ್, ಪಕ್ಷ ಇದರ ಬಗ್ಗೆ ಸಮಾಲೋಚನೆ ನಡೆಸಿ, ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.