ಭಾರತದ ಮಿಂಚಿನ ಬಳ್ಳಿ ಎಂದು ಹೆಸರು ಮಾಡಿದ್ದ ಸುಷ್ಮಾ ಸ್ವರಾಜ್ ಬಿಜೆಪಿ ಅಧಿಕಾರಕ್ಕೇರದ ದಿನಗಳಲ್ಲಿ ಪಕ್ಷದ ಮುಖವಾಣಿಯಾಗಿದ್ದರು. ತಮ್ಮ ಮಾತಿನ ಮೂಲಕ ಹೆಸರು ಮಾಡಿದ್ದ ಅವರು, ಅಂದಿನ ಪತ್ರಿಕೆಗಳ ಕಣ್ಮಣಿ ಆಗಿದ್ದರು. ಎಲ್ಲರೂ ಇವರನ್ನು ಬಿಜೆಪಿಯ ಮಿಂಚಿನ ಬಳ್ಳಿ ಎಂದೇ ಕರೆಯುತ್ತಿದ್ದರು.
ಮಧ್ಯಪ್ರದೇಶದ ವಿದಿಶಾ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ 66 ವರ್ಷದ ಸುಷ್ಮಾ, ಹರಿಯಾಣ ಮೂಲದವರಾಗಿದ್ದು, ರಾಜಕೀಯ ಪ್ರವೇಶಕ್ಕೂ ಮೊದಲು ವಕೀಲ ವೃತ್ತಿಯಲ್ಲಿದ್ದರು. ಸಂಸದೆಯಾಗಿ ಏಳು ಬಾರಿ ಮತ್ತು ವಿಧಾನಸಭಾ ಸದಸ್ಯೆಯಾಗಿ ಮೂರು ಬಾರಿ ಆಯ್ಕೆಯಾಗಿರುವ ಸುಷ್ಮಾ, 1977ರಲ್ಲಿ 25 ನೆಯ ವಯಸ್ಸಿಗೆ ಹರಿಯಾಣದ ಅತ್ಯಂತ ಕಿರಿಯ ಸಂಪುಟ ಸಚಿವೆ ಎಂಬ ಹೆಸರು ಪಡೆದಿದ್ದರು.
ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಮಾಹಿತಿ ಪ್ರಸಾರ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಸುಷ್ಮಾ ಸ್ವರಾಜ್, ಪ್ರಸ್ತುತ ಮೋದಿ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ್ದರು.
2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳುವ ಮೂಲಕ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರಾಜಕೀಯ ನಿವೃತ್ತಿ ಘೋಷಿಸಿದ್ದರು.
ನನಗೆ ಆರೋಗ್ಯ ಸ್ಥಿತಿ ಅಷ್ಟು ಉತ್ತಮವಾಗಿಲ್ಲ. ಈ ಹಿನ್ನೆಲೆಯಲ್ಲಿ ರಾಜಕೀಯ ನಿವೃತ್ತಿ ನಿರ್ಧಾರ ಕೈಗೊಂಡಿದ್ದೇನೆ ಎಂದು ಲೋಕಸಭೆ ಚುನಾವಣೆಗೂ ಮುನ್ನವೇ ಘೋಷಿಸಿದ್ದರು.
ಬಾಲ್ಯ ಜೀವನ: ಸುಷ್ಮಾ ಸ್ವರಾಜ್ ಅವರು 1952ರ ಫೆಬ್ರವರಿ ೧೪ ರಂದು ಹರಿಯಾಣದ ಅಂಬಾಲಾ ಕ್ಯಾಂಟ್ನಲ್ಲಿ ಜನಿಸಿದರು. ಇವರ ತಂದೆ ಹಾರ್ದೇವ್ ಶರ್ಮಾ ಮತ್ತು ತಾಯಿ ಲಕ್ಷ್ಮಿ ದೇವಿ. ಅವರು ಅಂಬಾಲಾ ಕಂಟೋನ್ಮೆಂಟ್ನ ಸನಾತನ ಧರ್ಮ ಕಾಲೇಜಿನಲ್ಲಿ ಸಂಸ್ಕೃತ ಮತ್ತು ರಾಜ್ಯಶಾಸ್ತ್ರ ವಿಷಯಗಳಲ್ಲಿ ಪದವಿ ಪಡೆದರು. ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಕಾನೂನು ಅಭ್ಯಾಸ ಮಾಡಿದರು.1973ರಲ್ಲಿ ಭಾರತದ ಸುಪ್ರೀಂ ಕೋರ್ಟ್ನಲ್ಲಿ ವಕೀಲರಾಗಿ ಅಭ್ಯಾಸ ಆರಂಭಿಸಿದರು.