ಮಿಡ್ನಾಪೋರ್ (ಪಶ್ಚಿಮ ಬಂಗಾಳ): ಅಂಫಾನ್ ಚಂಡಮಾರುತಕ್ಕೆ ಸಂಬಂಧಿಸಿದಂತೆ ಟಿಎಂಸಿ ಪಕ್ಷ ನೀಡಿದ ಪರಿಹಾರದ ಹಣ ಜನರಿಗೆ ತಲುಪವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ಆರೋಪಿಸಿತ್ತು. ಇದರಿಂದ ರೊಚ್ಚಿಗೆದ್ದ ಬಿಜೆಪಿಯ ಪೂರ್ವ ಮಿಡ್ನಾಪೋರ್ ಜಿಲ್ಲಾ ಕಾರ್ಯದರ್ಶಿ ಪಬಿತ್ರಾ ದಾಸ್ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಅಂಫಾನ್ ಚಂಡಮಾರುತಕ್ಕೆ ಬಲಿಪಶುಗಳಾದವರನ್ನು ನಿರ್ಲಕ್ಷಿಸಿ, ಪರಿಹಾರದ ಹಣವನ್ನು ಬೇರೆಯವರಿಗೆ ಟಿಎಂಸಿ ಪಕ್ಷ ನೀಡಿದೆ ಎಂದು ಈ ಹಿಂದೆ ಬಿಜೆಪಿ ಪ್ರತಿಭಟಿಸಿತ್ತು. ಈ ಹಿನ್ನೆಲೆ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪಬಿತ್ರಾ ದಾಸ್ ಅವರ ಮನೆಗೆ ನುಗ್ಗಿ ಟಿಎಂಸಿ ಪಕ್ಷದ ಗೂಂಡಾಗಳು ಮನೆಯವರನ್ನ ಥಳಿಸಿದ್ದು, ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ಬಿಜೆಪಿ ದೂರಿದೆ.
ಗಾಯಗೊಂಡ ಬಿಜೆಪಿ ಕಾರ್ಯದರ್ಶಿ ಖೇಜೂರಿ ಕ್ಷೇತ್ರದ ಟಿಎಂಸಿ ಶಾಸಕ ಮತ್ತು ಟಿಎಂಸಿ ಬ್ಲಾಕ್ ಅಧ್ಯಕ್ಷರ ಆದೇಶದ ಮೇರೆಗೆ ಕೆಲವು ಸಶಸ್ತ್ರ ಗೂಂಡಾಗಳು ನಮ್ಮ ಮನೆಯ ಮೇಲೆ ದಾಳಿ ಮಾಡಿದ್ದಾರೆ ಎಂದು ದಾಸ್ ಆರೋಪಿಸಿದ್ದಾರೆ.
ಭಾನುವಾರ ರಾತ್ರಿ ವೇಳೆ ಹಳ್ಳಿಗೆ ನುಗ್ಗಿದ ಟಿಎಂಸಿ ಗೂಂಡಾಗಳು ನಮ್ಮ ಮನೆಯ ಮೇಲೆ ದಾಳಿ ಮಾಡಿದ್ದಾರೆ. ನನ್ನ ಕುಟುಂಬದ ಮೂವರು ಮಹಿಳೆಯರನ್ನು ಸಹ ಥಳಿಸಿದ್ದಾರೆ ಎಂದು ದಾಸ್ ಹೇಳಿದ್ದಾರೆ.
ಇನ್ನು ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಹುಲ್ ಸಿನ್ಹಾ ಪ್ರತಿಕ್ರಿಯಿಸಿದ್ದು, ಸ್ಥಳೀಯ ಪೊಲೀಸರು ಮತ್ತು ಟಿಎಂಸಿ ಗೂಂಡಾಗಳ ನಡುವೆ ಸಂಬಂಧವಿದೆ, ಪೊಲೀಸರ ಸಹಾಯದಿಂದಲೇ ಟಿಎಂಸಿ ಗೂಂಡಾಗಳು ನಮ್ಮ ಪಕ್ಷದ ಕಾರ್ಯದರ್ಶಿ ಮೇಲೆ ಹಲ್ಲೆ ನಡೆಸಿದ್ದಾರೆ. ಆದ್ದರಿಂದ ಟಿಎಂಸಿ ಗೂಂಡಾಗಳು ಮತ್ತು ಅಲ್ಲಿನ ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.