ಚೆನ್ನೈ: ವಿಸಿಕೆ ಪಕ್ಷದ ಅಧ್ಯಕ್ಷ, ಸಂಸದ ತಿರುಮವಲವನ್ ಅವರ ವಿರುದ್ಧ ಪ್ರತಿಭಟನೆ ನಡೆಸಲು ತಮಿಳುನಾಡಿನ ಚಿದಂಬರಂ ಕ್ಷೇತ್ರಕ್ಕೆ ತೆರಳುತ್ತಿದ್ದ ಬಿಜೆಪಿ ನಾಯಕಿ ಖುಷ್ಬೂ ಸುಂದರ್ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮನುಸ್ಮೃತಿಯ ಬಗ್ಗೆ ಚಿದಂಬರಂ ಕ್ಷೇತ್ರದ ಸಂಸದ ತಿರುಮವಲವನ್ರ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಲು ಖುಷ್ಬೂ ಮುಂದಾಗಿದ್ದರು. ಆದರೆ ಚಿದಂಬರಂಗೆ ತೆರಳುವ ಮಾರ್ಗಮಧ್ಯೆ ಖುಷ್ಬೂ ಹಾಗೂ ಬಿಜೆಪಿಯ ಇತರ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ.
"ನಮ್ಮನ್ನ ಬಂಧಿಸಿ, ಪೊಲೀಸ್ ವ್ಯಾನ್‌ನಲ್ಲಿ ಕರೆದೊಯ್ಯಲಾಗುತ್ತಿದೆ. ಮಹಿಳೆಯರ ಘನತೆಗಾಗಿ ನಾವು ನಮ್ಮ ಕೊನೆಯುಸಿರಿರುವ ವರೆಗೂ ಹೋರಾಡುತ್ತೇವೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಜೀ ಯಾವಾಗಲೂ ಮಹಿಳೆಯರ ಸುರಕ್ಷತೆಯ ಬಗ್ಗೆ ಮಾತನಾಡುತ್ತಾರೆ. ನಾವು ಅವರ ಹಾದಿಯಲ್ಲೇ ನಡೆಯುತ್ತೇವೆಯೇ ಹೊರತು ತಲೆಬಾಗುವುದಿಲ್ಲ"ಎಂದು ಖುಷ್ಬೂ ಟ್ವೀಟ್ ಮಾಡಿದ್ದಾರೆ.
ವಿಸಿಕೆ ವಿರುದ್ಧ ವಾಗ್ದಾಳಿ ನಡೆಸಿದ ಖುಷ್ಬೂ 'ಹೇಡಿಗಳು' ಎಂದು ಕರೆದಿದ್ದಾರೆ. ಶಾಂತಿಯುತ ಪ್ರತಿಭಟನೆ ನಡೆಸಲು ಹೊರಟ ನಮ್ಮ ಹಕ್ಕನ್ನು ಕಿತ್ತುಕೊಂಡಿದ್ದಕ್ಕೆ ಆಡಳಿತ ಪಕ್ಷ ಎಐಎಡಿಎಂಕೆ ಮತ್ತು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರ ವಿರುದ್ಧ ಖುಷ್ಬೂ ಸುಂದರ್ ಕಿಡಿಕಾರಿದ್ದಾರೆ.