ಮಥುರಾ (ಉತ್ತರ ಪ್ರದೇಶ):ಪುರಸಭೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಿಜೆಪಿ ಕೌನ್ಸಿಲರ್ ಮತ್ತು ಅವರ ಪತಿ ವಿರುದ್ಧ ಮಥುರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಥುರಾ ಪುರಸಭೆಯಲ್ಲಿ ತಾರಕಕ್ಕೇರಿದ ಜಗಳ; ಸ್ಟೆನೊಗ್ರಾಫರ್ಗೆ ಬಿತ್ತು ಚಪ್ಪಲಿ ಏಟು - ಪುರಸಭೆ ಆಯುಕ್ತ ರವೀಂದ್ರ ಕುಮಾರ್ ಮಂದರ್
ಮಥುರಾದ ಪುರಸಭೆಯೊಂದರಲ್ಲಿ ಬಿಜೆಪಿ ಕೌನ್ಸಿಲರ್ ಹಾಗೂ ಪುರಸಭೆ ಆಯುಕ್ತರ ನಡುವೆ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿತ್ತು. ಈ ನಡುವೆ ಜಗಳ ಬಿಡಿಸಲು ಬಂದ ಸ್ಟೆನೊಗ್ರಾಫರ್ ಮೇಲೆ ಚಪ್ಪಲಿಯಿಂದ ಹೊಡೆದಿರುವ ಘಟನೆ ನಡೆದಿದೆ.
ನಗರ ನಿಗಮ್ ಮಥುರಾ - ವೃಂದಾವನ ಮಂಡಳಿ ಸಭೆಯಲ್ಲಿ ಬಿಜೆಪಿ ಕೌನ್ಸಿಲರ್ ದೀಪಿಕಾ ರಾಣಿ ಸಿಂಗ್ ಮತ್ತು ಪುರಸಭೆ ಆಯುಕ್ತ ರವೀಂದ್ರ ಕುಮಾರ್ ಮಂದರ್ ನಡುವೆ ವಾಗ್ವಾದ ನಡೆದಿದೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಆಗ ಸ್ಟೆನೊಗ್ರಾಫರ್ ಹೋಶಿಯಾರ್ ಸಿಂಗ್ ಮಧ್ಯಪ್ರವೇಶಿಸಿ ಜಗಳ ಬಿಡಿಸಲು ಹೋಗಿದ್ದಾರೆ. ಈ ವೇಳೆ ಪುರಸಭೆ ಸದಸ್ಯೆ ಹಾಗೂ ಆಕೆಯ ಪತಿ ಸ್ಟೆನೊಗ್ರಾಫರ್ ಮೇಲೆ ಹಲ್ಲೆ ಮಾಡಿದ್ದಾರೆ
"ವಾರ್ಡ್ ನಂಬರ್ 24 ರ ಕೌನ್ಸಿಲರ್ ದೀಪಿಕಾ ರಾಣಿ ಮತ್ತು ಅವರ ಪತಿ ಪುಷ್ಪೇಂದ್ರ ಪುರಸಭೆ ಆಯುಕ್ತರ ಸ್ಟೆನೊಗ್ರಾಫರ್ ಮೇಲೆ ಚಪ್ಪಲಿಗಳಿಂದ ಹಲ್ಲೆ ನಡೆಸಿದ್ದಾರೆ" ಎಂದು ಉಪ ಮುನ್ಸಿಪಲ್ ಕಮಿಷನರ್ ರಾಜ್ ಕುಮಾರ್ ಮಿತ್ತಲ್ ಹೇಳಿದ್ದಾರೆ. ಸಭೆಯಲ್ಲಿ ವಾಗ್ವಾದ ಕೋಲಾಹಲ, ಹಲ್ಲೆ ನಡೆದಿದ್ದರಿಂದ ಅಭಿವೃದ್ಧಿ ಕುರಿತು ಕರೆದ ಸಭೆ ಹಠಾತ್ತನೆ ಕೊನೆಗೊಂಡಿತು ಎಂದು ಆಯುಕ್ತರು ತಿಳಿಸಿದ್ದಾರೆ.