ನವದೆಹಲಿ:ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ ಕೆಲವರ ಕುರಿತು ಬಿಜೆಪಿ ಸಂಸದ ಅನಂತ್ಕುಮಾರ್ ಹೆಗಡೆ ನೀಡಿರುವ ವಿವಾದಿತ ಹೇಳಿಕೆ ಇದೀಗ ರಾಜಕೀಯ ಬಣ್ಣ ಪಡೆದುಕೊಂಡಿದ್ದು, ಇದೇ ವಿಷಯವನ್ನಿಟ್ಟುಕೊಂಡು ವಿಪಕ್ಷಗಳು ಆಡಳಿತ ಪಕ್ಷ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ಕ್ಷಮೆಯಾಚನೆ ಮಾಡುವಂತೆ ಪಟ್ಟು ಹಿಡಿದಿವೆ.
ಇದೇ ವಿಷಯವಾಗಿ ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಅನಂತ್ಕುಮಾರ್ ಹೆಗಡೆ ನೀಡಿರುವ ಹೇಳಿಕೆ ವಿಚಾರವಾಗಿ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದ್ದು, ಹೇಳಿಕೆಗೆ ಸಂಬಂಧಿಸಿದಂತೆ ಈಗಾಗಲೇ ಅವರು ಕೇಂದ್ರ ಬಿಜೆಪಿಗೆ ಸ್ಪಷ್ಟನೆ ನೀಡಿ ಪತ್ರ ಬರೆದಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಕಟಿಲ್ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುವ ಕುರಿತು ಚರ್ಚೆ ಮಾಡಲು ನಾನು ಹೆಗಡೆ ಮನೆಗೆ ಆಗಮಿಸಿದ್ದು, ಇದೇ ವಿಚಾರವಾಗಿ ಮಾತುಕತೆ ನಡೆಸಿದ್ದೇವೆ. ಕರ್ನಾಟಕ ರಾಜಕಾರಣದ ಬಗ್ಗೆ ಮಾತನಾಡಿರುವೆ ಹಾಗೇ ನಾವಿಬ್ಬರು ರಾಜಕೀಯ ಮಿತ್ರತ್ವರಾಗಿರುವ ಕಾರಣ ಅವರ ಮನೆಗೆ ಆಗಮಿಸಿರುವೆ ಎಂದಿದ್ದಾರೆ. ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬುದರ ಬಗ್ಗೆ ಸಿಎಂ ತೀರ್ಮಾನ ಕೈಗೊಳ್ಳಲಿದ್ದು, ಕರಾವಳಿ ಬಿಜೆಪಿ ಮುಖಂಡರು ತಮ್ಮ ನಿಲುವು ತಿಳಿಸಿದ್ದಾರೆ ಎಂದರು. ಸಚಿವ ಸಂಪುಟ ವಿಸ್ತರಣೆ ವೇಳೆ ತಮ್ಮನ ಕಡೆಗಣಿಸಲಾಗಿದೆ ಎಂದು ಕೇಳಿರುವ ಪ್ರಶ್ನೆಗೆ ಉತ್ತರಿಸಿದ ಅವರು, ಸಚಿವ ಸ್ಥಾನ ಯಾರಿಗೆ ನೀಡಬೇಕು ಎಂಬುದರ ಕುರಿತು ತೀರ್ಮಾನ ಕೈಗೊಳ್ಳುವ ಸಂಪೂರ್ಣ ಅಧಿಕಾರ ಮುಖ್ಯಮಂತ್ರಿ ಕೈಯಲ್ಲಿದ್ದು, ಮೊನ್ನೆ ಪಕ್ಷಕ್ಕೆ ಸೇರಿಕೊಂಡವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು. ದೆಹಲಿಯಲ್ಲಿನ ಅನಂತ್ಕುಮಾರ್ ಹೆಗಡೆ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿರುವ ಕಟೀಲ್, ಗಾಂಧಿ ಕುರಿತು ಹೆಗಡೆ ನೀಡಿರುವ ಹೇಳಿಕೆ ವಿಚಾರವಾಗಿ ಕೇಂದ್ರ ಬಿಜೆಪಿ ನಿರ್ಧಾರ ಕೈಗೊಳ್ಳಲಿದೆ ಎಂದಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಉತ್ತರ-ಕನ್ನಡ ಬಿಜೆಪಿ ಸಂಸದ ಅನಂತ್ಕುಮಾರ್ ಹೆಗಡೆ, ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ ಕೆಲವರ ಕುರಿತು ವಿವಾದಿತ ಹೇಳಿಕೆ ನೀಡಿ ಎಲ್ಲರ ಕಂಗೆಣ್ಣಿಗೆ ಗುರಿಯಾಗಿದ್ದರು.