ಕರ್ನಾಟಕ

karnataka

ETV Bharat / bharat

‘ರೈತರ ಬೆನ್ನು ಮೂಳೆಯನ್ನೇ ಸರ್ಕಾರ ಮುರಿದಿದೆ’.. ‘ಕಿಸಾನ್​ ಕಿ ಬಾತ್’​​​​ನಲ್ಲಿ ರಾಹುಲ್ ಗಾಂಧಿ ವಾಗ್ದಾಳಿ - ನೋಟು ರದ್ಧತಿ

ದೇಶದಲ್ಲಿ ರೈತರು ಸೇರಿ ವಿವಿಧ ಸಂಘಟನೆಗಳು ನೂತನ ಕೃಷಿ ಮಸೂದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಿವೆ. ಈ ಕುರಿತಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರೈತರ ಜೊತೆ ಮಸೂದೆಗಳ ಕುರಿತಂತೆ ಸಂವಾದ ನಡೆಸಿದ್ದಾರೆ. ನೂತನ ಕಾಯ್ದೆಯ ಕುರಿತು ಚರ್ಚಿಸಿದ್ದಾರೆ..

Rahul gandhi in Kiassan ki bath
ಕಿಸಾನ್​​ ಕಿ ಬಾತ್​ನಲ್ಲಿ ರಾಹುಲ್ ಗಾಂಧಿ

By

Published : Sep 29, 2020, 2:43 PM IST

ನವದೆಹಲಿ :ಕೃಷಿ ಮಸೂದೆಗಳನ್ನ ವಿರೋಧಿಸಿ ದೇಶಾದ್ಯಂತ ರೈತ ಸಮುದಾಯ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದೆ. ಈ ಹಿನ್ನೆಲೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಲವು ರಾಜ್ಯದ ರೈತರ ಜೊತೆ ಕಾಯ್ದೆ ಕುರಿತಂತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ್ದಾರೆ.

ಸರ್ಕಾರ ರೈತ ವಿರೋಧಿ ಕಾನೂನು ಜಾರಿ ಮಾಡುವ ಮೂಲಕ ಅನ್ನದಾತರ ಬೆನ್ನು ಮೂಳೆ ಮುರಿದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ತಮ್ಮ ‘ಕಿಸಾನ್​​ ಕಿ ಬಾತ್​​​’ ಕಾರ್ಯಕ್ರಮದ ವಿಡಿಯೋ ಹಂಚಿಕೊಂಡಿರುವ ರಾಹುಲ್, ದೇಶ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ವೇಳೆ ಬಿಜೆಪಿ ಬ್ರಿಟಿಷರ ಪರ ನಿಂತಿತ್ತು ಎಂದು ಆರೋಪಿಸಿದ್ದಾರೆ.

ಇಲ್ಲಿ ಕೃಷಿ ಮಸೂದೆ, ಜಿಎಸ್​​ಟಿ ಹಾಗೂ ನೋಟು ಅಮಾನ್ಯೀಕರಣ ಮೂರಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಒಂದೇ ವ್ಯತ್ಯಾಸವೇನೆಂದ್ರೆ ಆ ನೀತಿಗಳು ಪಾದದ ಅಡಿ ಕೊಡಲಿಗಳಂತೆ ಇದ್ದವು. ಈ ಮೂರು ಕೃಷಿ ಮಸೂದೆಗಳು ರೈತರ ಹೃದಯಕ್ಕೆ ಕಠಾರಿಗಳಿಂದ ತಿವಿದಂತೆ ಎಂದಿದ್ದಾರೆ.

ಈ ಬಗ್ಗೆ ರೈತರ ಜೊತೆ ಮಾತನಾಡುತ್ತಾ, ಬ್ರಿಟಿಷರ ವಿರುದ್ಧ ಮಹಾತ್ಮ ಗಾಂಧಿ ಹಲವು ಹೋರಾಟಗಳನ್ನು ನಡೆಸಿದ್ದರು. ಒಂದು ವೇಳೆ ಬಾಪು ಈಗ ಬದುಕಿದ್ರೆ ಈ ಕೃಷಿ ಮಸೂದೆಗಳನ್ನು ತಿರಸ್ಕರಿಸುತ್ತಿದ್ದರು ಎಂದು ಸಂವಾದದಲ್ಲಿ ಅಭಿಪ್ರಾಯಪಟ್ಟಿದ್ದಾರೆ ರಾಹುಲ್ ಗಾಂಧಿ.

ಹರಿಯಾಣದ ರೈತನೊಬ್ಬ ಮಾತನಾಡಿ, ಈ ಬಿಲ್​ಗಳಿಂದ ರೈತರಿಗೆ ಉಪಯೋಗವಾಗುವುದಾದ್ರೆ ಸರ್ಕಾರ ಯಾಕೆ ಬೆಂಬಲ ಬೆಲೆ ನಿಗದಿ ಮಾಡುತ್ತಿಲ್ಲ? ರೈತರ ಬೆಳೆಯನ್ನು ಏಜೆಂಟರು ಖರೀದಿಸುತ್ತಾರೆ. ಇದೀಗ ಕಾರ್ಪೊರೇಟ್​ಗಳಿಗೆ ನಮ್ಮ ಬೆಳೆ ಮಾರಾಟ ಮಾಡಲು ಮಧ್ಯವರ್ತಿಗಳು ಬರುತ್ತಾರೆ ಎಂದಿದ್ದಾರೆ.

ಬಳಿಕ ರಾಹುಲ್ ಗಾಂಧಿ ಉತ್ತರಿಸಿ, ನೋಟು ರದ್ಧತಿಯಿಂದ ಕಪ್ಪು ಹಣ ವಾಪಸ್ ಬರಲಿದೆ ಎಂದಿದ್ದರು. ಅದೊಂದು ದೊಡ್ಡ ಸುಳ್ಳು. ರೈತರು ಹಾಗೂ ದುಡಿಯುವ ವರ್ಗವನ್ನು ಸಂಕಷ್ಟದಲ್ಲಿ ಸಿಲುಕಿಸುವುದೇ ಅವರ ಮುಖ್ಯ ಉದ್ದೇಶ ಎಂದು ಆರೋಪಿಸಿದ್ದಾರೆ. ಇದೇ ರೀತಿ ಕೊರೊನಾ ಕಾಲದಲ್ಲೂ ಸಹ ಯಾವೊಬ್ಬ ಬಡವರಿಗೂ ಹಣ ನೀಡಲಿಲ್ಲ ಎಂದರು.

ಈ ಕೃಷಿ ಮಸೂದೆ ಸಂಬಂಧ ಕಾಂಗ್ರೆಸ್​ ಮುಖ್ಯಸ್ಥೆ ಸೋನಿಯಾ ಗಾಂಧಿ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಿಗೆ ಸೂಚನೆ ನೀಡಿದ್ದು, ಸಂವಿಧಾನದ 254 (2)ನೇ ವಿಧಿ ಅನ್ವಯ ಈ ಕಾನೂನುಗಳನ್ನು ಅಂಗೀಕರಿಸದಿರುವ ಸಾಧ್ಯತೆಗಳ ಕುರಿತು ಚರ್ಚಿಸಲು ತಿಳಿಸಿದ್ದಾರೆ.

ABOUT THE AUTHOR

...view details