ನವದೆಹಲಿ:ರಾಷ್ಟ್ರ ರಾಜಧಾನಿ ಕುಡಿಯುವ ನೀರು ಗುಣಮಟ್ಟದ ಪರೀಕ್ಷೆಗಳಲ್ಲಿ ವಿಫಲವಾಗಿದೆ ಎಂದು ಹೇಳಿರುವ ಬಿಐಎಸ್ ವರದಿಯನ್ನು ಸುಳ್ಳು ಮತ್ತು ರಾಜಕೀಯ ಪ್ರೇರಿತ ಎಂದು ನವದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಬಿಐಎಸ್( ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡೈಸೇಷನ್) ವರದಿ ಬಿಡುಗಡೆ ಮಾಡಿದ್ದಾರೆ. ದೆಹಲಿಯಿಂದ 11 ಕಡೆಗಳಲ್ಲಿ ನೀರಿನ ಮಾದರಿ ಸಂಗ್ರಹಿಸಲಾಗಿದ್ದು, ನೀರಿನ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿವೆ. ನವದೆಹಲಿಯ ನೀರು ಕುಡಿಯಲು ಯೋಗ್ಯವಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈ ವರದಿ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ಉಚಿತ ಕುಡುಯುವ ನೀರಿನ ಸೌಲಭ್ಯದ ಹೆಸರಿನಲ್ಲಿ ಕೇಜ್ರಿವಾಲ್ ಸರ್ಕಾರ, ಜನತೆಗೆ ವಿಷ ನೀಡುತ್ತಿದೆ. ಸುಮಾರು 20 ನಗರಗಲ್ಲಿ ಪರೀಕ್ಷೆ ನಡೆಸಲಾಗಿದ್ದು, ನವದೆಹಲಿಯ ನೀರು ವಿಷಕಾರಿ ಎಂದು ಸಾಬೀತಾಗಿದೆ. ಎಎಪಿ ಸರ್ಕಾರ ಉತ್ತಮವಾದ ಕುಡಿಯುವ ನೀರನ್ನ ಒದಗಿಸುವಲ್ಲಿ ವಿಫಲವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಹರ್ಷವರ್ಧನ್ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಕೇಜ್ರಿವಾಲ್, ನೀವು ಒಬ್ಬ ವೈದ್ಯರಾಗಿದ್ದೀರಿ. ನಿಮಗೆ ಈ ವರದಿ ಸುಳ್ಳು ಮತ್ತು ರಾಜಕೀಯ ಪ್ರೇರಿತ ಎಂದು ತಿಳಿದಿದೆ. ನಿಮ್ಮಂತವರೂ ಇಂತಹ ಹೊಲಸು ರಾಜಕಾರಣಕ್ಕೆ ಇಳಿಯಬೇಡಿ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು, ಕೇಜ್ರಿವಾಲ್ ಆರೋಪಕ್ಕೆ ಸಂಸತ್ನಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ರಾಮ್ ವಿಲಾಸ್ ಪಾಸ್ವಾನ್, ಶುದ್ದೀಕರಣ ಮಾಡದೆ ನೀವು ನೀರು ಕುಡಿಯಲು ಸಾಧ್ಯವಿಲ್ಲ. ಬೇಕಾದರೆ ಬಿಐಎಸ್ ಅಧಿಕಾರಿಗಳೊಂದಿಗೆ ನಿಮ್ಮ ಅಧಿಕಾರಿಗಳನ್ನು ನೇಮಿಸಿ ಒಂದು ತಂಡ ಮಾಡಿ, ಮತ್ತೊಮ್ಮೆ ನೀರಿನ ಮಾದರಿ ಪರೀಕ್ಷಿಸಿ ನೋಡಿ ಎಂದು ಪಾಸ್ವಾನ್ ಸವಾಲು ಹಾಕಿದ್ದಾರೆ.