ನವದೆಹಲಿ: ದೇಶಾದ್ಯಂತ ಹಕ್ಕಿ ಜ್ವರದ ಭೀತಿ ಆವರಿಸಿದ್ದು, ಇದಕ್ಕೆ ಸೂಕ್ತ ಉದಾಹರಣೆಯಂತೆ ಈಗಾಗಲೇ ( ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ, ಗುಜರಾತ್ ಮತ್ತು ಉತ್ತರ ಪ್ರದೇಶ)ಗಳಲ್ಲಿ ಕಾಯಿಲೆ ಹರಡುತ್ತಿರುವುದು ದೃಢವಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ನಡುವೆ ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಮೃತಪಟ್ಟ ಹಕ್ಕಿಗಳ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿಗಾಗಿ ಎದುರು ನೋಡಲಾಗುತ್ತಿದೆ.
ಈ ಹಿಂದೆ ಛತ್ತೀಸ್ಘಡದ ಬಾಲೋಡ್ ಜಿಲ್ಲೆಯಲ್ಲಿ ಮೃತಪಟ್ಟ ಕಾಡು ಪಕ್ಷಿಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ಪೈಕಿ ಸಕಾರಾತ್ಮಕ ವರದಿ ಬಂದಿಲ್ಲ ಎಂದು ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಹರಿಯಾಣದ ಪಂಚಕುಲ ಜಿಲ್ಲೆಯ ಎರಡು ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ ಹಕ್ಕಿಜ್ವರ ದೃಢವಾದ ನಂತರ ರಾಜ್ಯ ಸರ್ಕಾರವು ಒಂಭತ್ತು ಕ್ಷಿಪ್ರ ಪ್ರತಿಕ್ರಿಯೆ ತಂಡವನ್ನು ನಿಯೋಜಿಸಿದೆ. ಇವು ತಮ್ಮ ಕಾರ್ಯವನ್ನು ಮುಂದುವರೆಸಿವೆ.
ಗುಜರಾತ್‌ನ ಸೂರತ್ ಮತ್ತು ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ಕಾಗೆ / ಕಾಡು ಪಕ್ಷಿಗಳ ಮಾದರಿಗಳಲ್ಲಿ ಹಕ್ಕಿ ಜ್ವರ ಇರುವುದು ದೃಢವಾಗಿದೆ. ಇದಲ್ಲದೆ ಕಾಂಗ್ರಾ ಜಿಲ್ಲೆಯಿಂದ (ಹಿಮಾಚಲ ಪ್ರದೇಶ) 86 ಕಾಗೆಗಳ ಅಸಾಮಾನ್ಯ ಸಾವಿನ ವರದಿಗಳು ಬಂದಿವೆ ಎಂದು ತಿಳಿಸಿದೆ.
ಕಾಡು ಪಕ್ಷಿಗಳ ಅಸಾಮಾನ್ಯ ಸಾವಿನ ವರದಿಗಳನ್ನು ನಹನ್, ಬಿಲಾಸ್ಪುರ್ ಮತ್ತು ಮಂಡಿ (ಹಿಮಾಚಲ ಪ್ರದೇಶ)ದಿಂದಲೂ ಸ್ವೀಕರಿಸಲಾಗಿದೆ ಮತ್ತು ಈಗಾಗಲೇ ಮೃತ ಪಕ್ಷಿಗಳ ಮಾದರಿಗಳನ್ನು ಪರೀಕ್ಷೆಗಾಗಿ ಗೊತ್ತುಪಡಿಸಿದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.