ಕಾನ್ಪುರ(ಉತ್ತರ ಪ್ರದೇಶ): ಜುಲೈ 3 ರಂದು ಎಂಟು ಪೊಲೀಸರ ಹತ್ಯಾಕಾಂಡದ ಆರೋಪಿಗಳಲ್ಲಿ ಒಬ್ಬನಾದ ಉಮಕಾಂತ್ ಶುಕ್ಲಾ, ಚೌಬೆಪುರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ.
ವಿಶೇಷ ಎಂದರೆ ಉಮಕಾಂತ್ ಶುಕ್ಲಾ ಕುತ್ತಿಗೆ ಫಲಕವೊಂದನ್ನು ಧರಿಸಿದ್ದ. ಅದರಲ್ಲಿ, ಬಿಕ್ರೂ ಹತ್ಯಾಕಾಂಡದಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದು, ಅಪರಾಧಕ್ಕೆ ಕ್ಷಮೆ ಕೋರಿದ್ದ ಎನ್ನಲಾಗಿದೆ. ಆತನ ಜೀವ ಉಳಿಸುವಂತೆ ಅವರ ಕುಟುಂಬದ ಸದಸ್ಯರು ಪೊಲೀಸರಿಗೆ ಮನವಿ ಮಾಡಿದ್ದಾರೆ. ಸದ್ಯ ಆತನನ್ನು ಚೌಬೆಪುರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಜುಲೈ 3 ರಂದು ಕಾನ್ಪುರದಲ್ಲಿ ಎಂಟು ಮಂದಿ ಪೊಲೀಸ್ ಸಿಬ್ಬಂದಿಯ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಮತ್ತು ಕಾನ್ಪುರ್ ಪೊಲೀಸರು ಉಮಾಕಾಂತ್‌ಗಾಗಿ ಹುಡುಕಾಟ ನಡೆಸುತ್ತಿದ್ದರು. ಆತನ ಹಲವು ಅಡಗುತಾಣಗಳ ಮೇಲೆ ದಾಳಿ ನಡೆಸಿದ್ದರು.
ಶನಿವಾರ ರಾತ್ರಿ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕಾನ್ಪುರ ಪೊಲೀಸರು ಉಮಕಾಂತ್ ಶರಣಾಗತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಆತನಿಗೆ ಸಂಬಂಧಿಸಿದ ಹಲವು ಸ್ಥಳಗಳಲ್ಲಿ ಪೊಲೀಸರು ದಾಳಿ ನಡೆಸಿದ ಪರಿಣಾಮದಿಂದಾಗಿ ಈತ ಶರಣಾಗಿದ್ದಾನೆ ಎಂದು ತಿಳಿಸಿದ್ದಾರೆ.
ವಿಚಾರಣೆ ವೇಳೆ, ಪ್ರತ್ಯೇಕ ಪೊಲೀಸ್ ಎನ್‌ಕೌಂಟರ್‌ಗಳಲ್ಲಿ ಬಲಿಯಾದ ವಿಕಾಸ್ ದುಬೆ ಮತ್ತು ಅವರ ಸಹಚರರಾದ ಅಮರ್ ದುಬೆ, ಅತುಲ್ ದುಬೆ, ಪ್ರೇಮ್ ಕುಮಾರ್, ಪ್ರಭಾತ್ ಮಿಶ್ರಾ ಅವರೊಂದಿಗೆ ಪೊಲೀಸ್ ಪಾರ್ಟಿಯಲ್ಲಿ ನಿರ್ದಾಕ್ಷಿಣ್ಯವಾಗಿ ಗುಂಡಿನ ದಾಳಿ ನಡೆಸಿದ್ದನ್ನು ಒಪ್ಪಿಕೊಂಡಿದ್ದಾಗಿ ಪ್ರಕಟಣೆಯಲ್ಲಿ ತಿಳಿಸಲಾಗದೆ.