ನವದೆಹಲಿ:ಬಿಹಾರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಒಟ್ಟು ಅಭ್ಯರ್ಥಿಗಳಲ್ಲಿ 1,197 ಮಂದಿ ಅಪರಾಧ ಹಿನ್ನೆಲೆಯನ್ನು ಹೊಂದಿದ್ದರು ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಅಪರಾಧ ಹಿನ್ನೆಲೆಯನ್ನು ಹೊಂದಿರುವ ಅಭ್ಯರ್ಥಿಗಳಲ್ಲಿ 467 ಮಂದಿ ರಾಷ್ಟ್ರೀಯ ಹಾಗೂ ರಾಜ್ಯದ ಪ್ರಮುಖ ಪಕ್ಷಗಳ ಅಭ್ಯರ್ಥಿಗಳಾಗಿದ್ದು, ಉಳಿದ 730 ಮಂದಿ ಇತರ ಪಕ್ಷಗಳಿಂದ ಹಾಗೂ ಸ್ವತಂತ್ರವಾಗಿ ಸ್ಪರ್ಧೆ ನಡೆಸಿದ್ದರು.
ಮೂರು ಹಂತದ ಚುನಾವಣೆಯಲ್ಲಿ ಒಟ್ಟು 3,733 ಮಂದಿ ಸ್ಪರ್ಧೆ ಮಾಡಿದ್ದು, ಇದರಲ್ಲಿ 371 ಮಂದಿ ಮಹಿಳಾ ಸ್ಪರ್ಧಾಳುಗಳಿದ್ದರು ಎಂದು ಚುನಾವಣಾ ಆಯೋಗದ ಮಾಹಿತಿಯನ್ನು ಬಹಿರಂಗಪಡಿಸಿದೆ.
ಬಿಹಾರದ ಮುಖ್ಯ ಚುನಾವಣಾಧಿಕಾರಿ ಚುನಾವಣಾ ಆಯೋಗಕ್ಕೆ ನೀಡಿದ ಮಾಹಿತಿಯಂತೆ ಸುಮಾರು ಚುನಾವಣೆಯ ವೇಳೆಯಲ್ಲೂ ಅನೇಕ ಮಂದಿಯ ವಿರುದ್ಧ ದೂರು ದಾಖಲಾಗಿದೆ. ಚುನಾವಣಾ ಪ್ರಚಾರ ರ‍್ಯಾಲಿ ಆಯೋಜಕರ ಮೇಲೆಯೂ 156 ದೂರುಗಳು ದಾಖಲಾಗಿವೆ. ಈ ದೂರುಗಳಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯೂ ಸೇರ್ಪಡೆಯಾಗಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಕೋವಿಡ್ ಮಾರ್ಗಸೂಚಿಯ ಉಲ್ಲಂಘನೆ ನಿಷೇಧಾಜ್ಞೆಯ ಉಲ್ಲಂಘನೆಗೆ ಸಮ ಎಂದು ಚುನಾವಣಾ ಪ್ಯಾನೆಲ್ ಚುನಾವಣಾ ಪ್ರಚಾರ ಸಭೆಗಳ ಆಯೋಜಕರಿಗೆ ಎಚ್ಚರಿಕೆ ನೀಡಿತ್ತು. ಆದರೂ ಕೂಡಾ ಕೆಲವರು ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ಕಾರಣದಿಂದ ಆಯೋಗದ ಕೆಂಗಣ್ಣಿಗ ಗುರಿಯಾಗಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಸಾಂಕ್ರಾಮಿಕ ರೋಗ ಕಾಯ್ದೆಗಳನ್ನು ಕೂಡಾ ಇಲ್ಲಿ ಜಾರಿಗೊಳಿಸಲಾಗಿದ್ದು, ಈ ಕಾಯ್ದೆಯ ಅಡಿಯಲ್ಲಿಯೂ ಕೆಲವು ಮಂದಿಯ ವಿರುದ್ಧ ದೂರು ದಾಖಲಾಗಿದೆ.