ಪಾಟನಾ: ಬಿಹಾರ ಚುನಾವಣೆ ಸಮೀಪಿಸುತ್ತಿದ್ದು, ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಗರಿಗೆದರಿವೆ. ಇಂದು ಸಂಜೆ 5 ಗಂಟೆಗೆ ಲೋಕ ಜನಶಕ್ತಿ ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಸಭೆ ನಡೆಯಲಿದೆ. ಸಭೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಶಹನವಾಜ್ ಕೈಫಿ ಮತ್ತು ರಾಜ್ಯ ಸಂಸದೀಯ ಮಂಡಳಿ ಅಧ್ಯಕ್ಷ ರಾಜು ತಿವಾರಿ ಸೇರಿ ಪಕ್ಷದ ಮುಖಂಡರು ಭಾಗಿಯಾಗುವ ಸಾಧ್ಯತೆಯಿದೆ. ಇಂದು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಸಲಾಗುತ್ತೆ.
ಕಳೆದ ಗುರುವಾರವಷ್ಟೇ ಎಲ್ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭೇಟಿ ಮಾಡಿ ಸೀಟು ಹಂಚಿಕೆ ವಿಚಾರವಾಗಿ ಚರ್ಚಿಸಿದ್ದರು. ಎಲ್ಜೆಪಿಗೆ ಬಿಜೆಪಿ 27 ವಿಧಾನಸಭೆ ಹಾಗೂ ಎರಡು ವಿಧಾನಪರಿಷತ್ ಸ್ಥಾನಗಳನ್ನ ನೀಡಿದೆ ಎನ್ನಲಾಗಿದೆ.
143 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಾ ಎಲ್ಜೆಪಿ..?
ಸೀಟುಗಳ ಹಂಚಿಕೆಯಲ್ಲಿ ಏರುಪೇರಾದರೆ, ಎಲ್ಜೆಪಿ 143 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನ ಕಣಕ್ಕಿಳಿಸುವ ಸಾಧ್ಯತೆ ಇದೆ. 2015 ರಲ್ಲಿ 42 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಕೇವಲ 2 ಸ್ಥಾನ ಪಡೆದುಕೊಂಡಿತ್ತು. ಎಲ್ಜೆಪಿಗೆ ಬಿಜೆಪಿ 27 ವಿಧಾನಸಭಾ ಕ್ಷೇತ್ರ ಹಾಗೂ ಪರಿಷತ್ನಲ್ಲಿ 2 ಸ್ಥಾನ ನೀಡಿದ್ರೂ ಪಕ್ಷದ ಮುಖ್ಯಸ್ಥ ಚಿರಾಗ್ 43 ಸ್ಥಾನ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಕಡಿಮೆ ಕ್ಷೇತ್ರಗಳನ್ನ ನೀಡಿದ್ರೆ, ಎನ್ಡಿಎ ಯಿಂದ ಹೊರಬಂದು ಸ್ವತಂತ್ರವಾಗಿ ಸ್ಪರ್ಧಿಸುವ ಸಾಧ್ಯತೆಯಿದೆ.
ಬಿಜೆಪಿ ಹಾಗೂ ಜೆಡಿಯುಗೆ ಎಷ್ಟು ಸೀಟ್ಗಳು?
ಈಗಾಗಲೇ ಎನ್ಡಿಎ ಸ್ಥಾನ ಹಂಚಿಕೆ ಸೂತ್ರವನ್ನ ಸಿದ್ಧಪಡಿಸಿದೆ. ಬಿಹಾರದಲ್ಲಿ ಒಟ್ಟು 243 ಕ್ಷೇತ್ರಗಳಿದ್ದು, 121 ಸ್ಥಾನ ಬಿಜೆಪಿ ಮತ್ತು 122 ಸ್ಥಾನಗಳಲ್ಲಿ ಜೆಡಿಯು ಸ್ಪರ್ಧಿಸುತ್ತದೆ ಎಂದು ತಿಳಿದು ಬಂದಿದೆ. ಜೆಡಿಯು ತನ್ನ 122 ಸ್ಥಾನಗಳಲ್ಲಿ ಜಿತನ್ ರಾಮ್ ಮಂಝಿ ಹಿಂದೂಸ್ಥಾನ್ ಅವಂ ಮೋರ್ಚಾಗೆ ಕೆಲ ಸೀಟುಗಳನ್ನ ಹಂಚಲಿದ್ದು, ಬಿಜೆಪಿ ತನ್ನ ಪಾಲಿನಲ್ಲಿ ಎಲ್ಜೆಪಿಗೆ ಸ್ಥಾನ ನೀಡಲಿದೆ.
ಈ ಬಾರಿ ಜೆಡಿಯು ಹೆಚ್ಚಿನ ಸ್ಥಾನಗಳನ್ನ ಕೋರಿದ್ದು, 2010ರ ಸೀಟು ಹಂಚಿಕೆ ಫಾರ್ಮುಲ ಅನುಸರಿಸುವಂತೆ ಬಿಜೆಪಿಗೆ ಸಲಹೆ ನೀಡಿದೆ. 2010 ರಲ್ಲಿ ಬಿಜೆಪಿ 102, ಜೆಡಿಯು 141 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಆಗ ಜೆಡಿಯು 115 ಸ್ಥಾನಗಳನ್ನ ಪಡೆದಿದ್ದು, ಬಿಜೆಪಿ 91 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು.