ದೆಹಲಿ: ಬಿಹಾರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮೊದಲ ಹಂತದ ಚುನಾವಣೆಗೆ ಅಭ್ಯರ್ಥಿಗಳನ್ನು ಫೈನಲ್ ಮಾಡಲು ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ(ಸಿಇಸಿ) ಇಂದು ಸಂಜೆ ಸಭೆ ಕರೆದಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಿವಾಸದಲ್ಲಿ ಸಭೆ ನಡೆಯಲಿದ್ದು, ಪಕ್ಷದ ಪ್ರಮುಖರು ಭಾಗಿಯಾಗಲಿದ್ದಾರೆ. ಇಂದು 2 ಮತ್ತು 3 ನೇ ಹಂತದ ಚುನಾವಣೆಗೆ ಅಭ್ಯರ್ಥಿಗಳನ್ನೂ ಘೋಷಿಸುವ ಸಾಧ್ಯತೆಯಿದೆ.
ಅಕ್ಟೋಬರ್ 5 ರಂದು ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಸಭೆ ನಡೆಸಿ, ಅ. 7 ರಂದು 21 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿತು. ಇದು ಪಕ್ಷದ ಆಂತರಿಕ ಕಲಹಗಳಿಗೆ ಎಡೆ ಮಾಡಿಕೊಟ್ಟಿತು. ಅಭ್ಯರ್ಥಿಗಳ ಆಯ್ಕೆ ನ್ಯಾಯ ಯುತವಲ್ಲ, ಈ ಅನ್ಯಾಯವನ್ನ ಸಹಿಸಲ್ಲ ಎಂದು ರಾಜ್ಯ ನಾಯಕರು ಹೈಕಮಾಂಡ್ ವಿರುದ್ಧ ಗರಂ ಆದರು. ಆರ್ಜೆಡಿಯೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಕೈ ನಾಯಕರು, ನಮ್ಮ ಪಕ್ಷದ ಪ್ರಾಬಲ್ಯ ಇರುವ ಕ್ಷೇತ್ರಗಳನ್ನ ಆರ್‌ಜೆಡಿ ನೀಡಿಲ್ಲ. ನಮಗೆ ನೀಡಿರುವ ಕ್ಷೇತ್ರಗಳಲ್ಲಿ ನಾವು ಗೆಲ್ಲೋದು ತುಂಬಾ ಕಷ್ಟ ಎಂದಿದ್ದಾರೆ.
ಬಿಹಾರದಲ್ಲಿ ಶತಾಯಗತಾಯ ಮೈತ್ರಿ ಸರ್ಕಾರವನ್ನ ಜಾರಿಗೆ ತರಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್, ಪಕ್ಷದ ಗೆಲುವಿಗಾಗಿ 6 ಸಮಿತಿಗಳನ್ನ ರಚಿಸಿದೆ. ರಂದೀಪ್ ಸುರ್ಜೇವಾಲಾ ನೇತೃತ್ವದಲ್ಲಿ ಚುನಾವಣಾ ಮತ್ತು ಸಮನ್ವಯ ಸಮಿತಿ ರಚಿಸಲಾಗಿದೆ. ಮೋಹನ್ ಪ್ರಕಾಶ್ ಅವರನ್ನು ಸಂಚಾಲಕರಾಗಿ ನೇಮಿಸಲಾಗಿದೆ. ಆದರೆ, ರಾಜ್ಯಾಧ್ಯಕ್ಷ ಮದನ್ ಮೋಹನ್ ಝಾ, ಸಿಎಲ್ಪಿ ನಾಯಕ ಸದಾನಂದ್ ಸಿಂಗ್, ಸಂಸದ ಮತ್ತು ಪ್ರಚಾರ ಸಮಿತಿಯ ಮುಖ್ಯಸ್ಥ ಅಖಿಲೇಶ್ ಪ್ರಸಾದ್ ಸಿಂಗ್ ಅವರನ್ನ ಸಮಿತಿಯಿಂದ ಹೊರಗಿಟ್ಟಿರೋದು ನಾಯಕರ ಮತ್ತಷ್ಟು ಮುನಿಸಿಗೆ ಕಾರಣವಾಗಿದೆ.