ನವದೆಹಲಿ:ಬಿಹಾರ ಚುನಾವಣೆಗೆ ಕೆಲವೇ ದಿನಗಳಿದ್ದು, ಎರಡನೇ ಹಂತದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಮೂರನೇ ಒಂದು ಭಾಗದಷ್ಟು ಅಭ್ಯರ್ಥಿಗಳು ಅಪರಾಧ ಹಿನ್ನೆಲೆ ಹೊಂದಿದ್ದಾರೆ ಎಂದು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ತನ್ನ ವರದಿಯಲ್ಲಿ ಹೇಳಿದೆ.
ಆರ್‌ಜೆಡಿ ಪಾಲು ಹೆಚ್ಚು:
ಇದರಲ್ಲಿ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಅಪರಾಧ ಹಿನ್ನೆಲೆ ಹೊಂದಿದ ಗರಿಷ್ಠ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎಂದು ಎಡಿಆರ್ ಹೇಳಿದ್ದು, ಅಂಕಿ ಅಂಶಗಳ ಮೂಲಕ ಮಾಹಿತಿಯನ್ನು ಬಹಿರಂಗಪಡಿಸಿದೆ.
ಎರಡನೇ ಹಂತದ ಚುನಾವಣೆಯಲ್ಲಿ 1,463 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಅವರ ಅಫಿಡವಿಡ್ಗಳನ್ನು ವಿಶ್ಲೇಷಿಸಲಾಗಿದೆ. ಈ ಅಭ್ಯರ್ಥಿಗಳಲ್ಲಿ 502 ಅಂದರೆ ಶೇಕಡಾ 34ರಷ್ಟು ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಕೇಸ್ಗಳು ದಾಖಲಾಗಿವೆ ಎಂದು ಎಡಿಆರ್ ಹೇಳಿದೆ.
ಎರಡನೇ ಹಂತದ ಚುನಾವಣೆಯಲ್ಲಿ ಆರ್‌ಜೆಡಿಯ 56 ಅಭ್ಯರ್ಥಿಗಳಲ್ಲಿ 36, ಬಿಜೆಪಿಯ 46 ಅಭ್ಯರ್ಥಿಗಳಲ್ಲಿ 29, ಕಾಂಗ್ರೆಸ್ನ 24 ಅಭ್ಯರ್ಥಿಗಳಲ್ಲಿ 14, ಎಲ್‌ಜೆಪಿಯ 52 ಅಭ್ಯರ್ಥಿಗಳಲ್ಲಿ 28, 33 ಅಭ್ಯರ್ಥಿಗಳ ಪೈಕಿ 16 ಅಭ್ಯರ್ಥಿಗಳು, ಬಿಎಸ್‌ಪಿ ಮತ್ತು ಜೆಡಿಯುನ 43 ಅಭ್ಯರ್ಥಿಗಳಲ್ಲಿ 20 ಮಂದಿ ಅಪರಾಧ ಹಿನ್ನೆಲೆ ಉಳ್ಳವರಾಗಿದ್ದಾರೆ.
ಕಣದಲ್ಲಿದ್ದಾರೆ ಅತ್ಯಾಚಾರ, ಕೊಲೆ ಆರೋಪಿಗಳು:
ಎಡಿಆರ್ ವಿಶ್ಲೇಷಿಸಿದ ಎಲ್ಲಾ ಅಭ್ಯರ್ಥಿಗಳಲ್ಲಿ, ಶೇಕಡಾ 27ರಷ್ಟು ಅಭ್ಯರ್ಥಿಗಳ ವಿರುದ್ಧ ಅತ್ಯಾಚಾರ, ಕೊಲೆ, ಹಲ್ಲೆ ಮತ್ತು ಅಪಹರಣ ಸೇರಿದಂತೆ ಗಂಭೀರ ಆರೋಪಗಳಿವೆ. ಎಲ್ಲಾ ಪಕ್ಷಗಳು ಕ್ರಿಮಿನಲ್ ಅಪರಾಧ ಹಿನ್ನೆಲೆ ಹೊಂದಿರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿವೆ.
ಅಭ್ಯರ್ಥಿಗಳ ಪೈಕಿ ಶೇ 34ರಷ್ಟು ಕೋಟ್ಯಧೀಶರು:
ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಂತದಲ್ಲಿ ಸ್ಪರ್ಧಿಸುವ 1,463 ಅಭ್ಯರ್ಥಿಗಳಲ್ಲಿ 495 ಅಂದರೆ ಶೇಕಡಾ 34ರಷ್ಟು ಮಂದಿ ಕೋಟ್ಯಧೀಶರಾಗಿದ್ದಾರೆ ಎಂದು ಎಡಿಆರ್ ವರದಿಯಲ್ಲಿ ತಿಳಿಸಿದೆ.