ಪಾಟ್ನಾ: ದೇಶದಲ್ಲಿ ಗುಂಪುಹಲ್ಲೆ ಮತ್ತು ಹತ್ಯೆಗಳನ್ನು ನಿಲ್ಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದು ರಾಷ್ಟ್ರಾದ್ಯಂತ ಸದ್ದು ಮಾಡಿದ್ದ 49 ಸೆಲೆಬ್ರೆಟಿಗಳಿಗೆ ಈಗ ನಿರಾಳ ಸಿಕ್ಕಿದೆ.
ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಅಡೂರ್ ಗೋಪಾಲಕೃಷ್ಣನ್, ಮಣಿ ರತ್ನಂ, ಅನುರಾಗ್ ಕಶ್ಯಪ್, ಶುಭಾ ಮಂಗಲ್, ಶ್ಯಾಮ್ ಬೆಂಗಲ್, ಇತಿಹಾಸ ತಜ್ಞ ರಾಮಚಂದ್ರ ಗುಹಾ ಸೇರಿದಂತೆ ಒಟ್ಟು 49 ಗಣ್ಯರು ಪ್ರಧಾನಿಗೆ ಪತ್ರ ಬರೆದಿದ್ದರು.
ಗಣ್ಯರು ಪ್ರಧಾನಿಗೆ ಬರೆದ ಪತ್ರದಿಂದ ದೇಶದ ಘನತೆಗೆ ಧಕ್ಕೆಯಾಗಿದೆ. ಇವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲು ಪೊಲೀಸರಿಗೆ ನಿರ್ದೇಶನ ನೀಡಿ ಎಂದು ಬಿಹಾರದ ಮುಜಪ್ಫರಪುರ ಮೂಲದ ವಕೀಲರೊಬ್ಬರು ಇಲ್ಲಿನ ನ್ಯಾಯಾಲಯದ ಮೊರೆ ಹೋಗಿದ್ದರು.
ದೂರಿಗೆ ಸಂಬಂಧಿಸಿದಂತೆ ಆರೋಪಿಗಳಿಗೆ ಯಾವುದೇ ಆಧಾರಗಳಿಲ್ಲ ಎಂಬುದು ತನಿಖೆಯಿಂದ ಪತ್ತೆಯಾಗಿದೆ. ಹೀಗಾಗಿ, ಪ್ರಕರಣವನ್ನು ರದ್ದು ಮಾಡುವಂತೆ ಆದೇಶಿಸಿದ್ದೇನೆ ಎಂದು ಮುಜಪ್ಫರಪುರದ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ದೇಶದ್ರೋಹ ಆರೋಪ ಎದುರಿಸುತ್ತಿದ್ದ ಗಣ್ಯರು ಅಧಿಕಾರಿಗಳ ಹೇಳಿಕೆಯಿಂದ ನಿರಾಳರಾಗಿದ್ದಾರೆ.